-ಡಾ. ಕೆ. ಪುಟ್ಟಸ್ವಾಮಿ
ಕನಕಪುರಕ್ಕೆ ಹತ್ತಿರದಲ್ಲೊಂದು ಹಳ್ಳಿ, ಅಲ್ಲೊಬ್ಬ ಇಪ್ಪತ್ತರ ಹರೆಯದ ತರುಣ. ಹೆಸರು ರಾಮ, ಊರಿನವರ ದೃಷ್ಟಿಯಲ್ಲಿ ದಡ್ಡ. ಅದಕ್ಕೆ 'ಯಾಡ್ರಾಮ' ಎಂಬ ಉಪನಾಮ. ರಾಮನಿಗಿದ್ದದ್ದು ಎರಡೇ ಗೀಳು. ಒಂದು ರುಚಿಗೆ ಮತ್ತೊಂದು ಅಭಿರುಚಿಗೆ ಸಂಬಂಧಪಟ್ಟ ಗೀಳುಗಳು. ಬೋಂಡಾ ತಿನ್ನುವುದು ರುಚಿಗೆ ಸಂಬಂಧಿಸಿದ ಗೀಳಾದರೆ, ಅಭಿರುಚಿಗೆ ಸಂಬಂಧಪಟ್ಟದ್ದು ರಾಜ್ ಕುಮಾರ್ ಚಿತ್ರಗಳ ವೀಕ್ಷಣೆ. ರಾಮ ಇದ್ದದ್ದು ಸೋದರಮಾವನ ಆಶ್ರಯದಲ್ಲಿ ತನ್ನ ಸೋದರಳಿಯ ವಿದ್ಯಾವಂತನಾಗಲಿ ಎಂಬ ಹಂಬಲದಿಂದ ಮಾವ ಕನಕಪುರದ ದೇಗುಲಮಠಕ್ಕೆ ಹೈಸ್ಕೂಲು ವಿದ್ಯಾಭ್ಯಾಸಕ್ಕೆ ಸೇರಿಸಿದ್ದರು. ಮಠದ ಸರಳ ಊಟ ನಾಲಗೆಗೆ ರುಚಿ ಕಾಣಲಿಲ್ಲ. ದಡ್ಡತನದಿಂದ ತಲೆಗೆ ಓದು ಹತ್ತಲಿಲ್ಲ. ಬೋಂಡಾ ಮತ್ತು ಸಿನಿಮಾ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ನೋಟುಬುಕ್ಕುಗಳನ್ನು ತೂಕಕ್ಕೆ ಹಾಕಿ ಬೋಂಡಾ ತಿಂದ. ಮಾವ ಕೊಡಿಸಿದ್ದ ಭಾರದ್ವಾಜ ನಿಘಂಟನ್ನು ಗೆಳೆಯರಿಗೆ ಮಾರಿ ಕದ್ದು 'ವೀರ ಕೇಸರಿ' ಸಿನಿಮಾ ನೋಡಿದ. ಬೇರೆ ವಿದ್ಯಾರ್ಥಿಗಳ ಪುಸ್ತಕಗಳನ್ನು ಕದ್ದು ಸಿಕ್ಕಿಕೊಂಡಾಗ ಓದಿಗೆ ತಿಲಾಂಜಲಿ ಇಟ್ಟ. ಮಾವ ತೋಟಕಾಯಲು ಹಾಕಿದ. ಆ ವೇಳೆಗೆ ರುಚಿ-ಅಭಿರುಚಿಗಳ ದಾಸನಾಗಿದ್ದ ಯಾಡ್ರಾಮ, ಕನಕಪುರಕ್ಕೆ ರಾಜ್ ಕುಮಾರ್ ಸಿನಿಮಾ ಬಂದಿದೆ ಎಂದು ತಿಳಿದ ಕೂಡಲೇ ತಮ್ಮ ತೋಟದಲ್ಲೇ ತೆಂಗಿನಕಾಯಿ 'ಕದ್ದು' ರಾತ್ರಿ ವೇಳೆ ಕಳ್ಳಮಾಲು ಕೊಳ್ಳುವ 'ನಂಬಿಕಸ್ಥರಿಗೆ' ಮಾರಿ ಬಂದ ಹಣದಿಂದ ಬೋಂಡಾ, ಸಿನಿಮಾ ಯಜ್ಞ ಮುಂದುವರಿಸುತ್ತಿದ್ದ. ಕನಕಪುರದಲ್ಲಿ ರಾಜ್ ಕುಮಾರ್ ಸಿನಿಮಾ ತೆರೆಕಾಣುವುದಕ್ಕೂ, ತೋಟದಲ್ಲಾಗುವ ಕಳ್ಳತನಕ್ಕೂ ಸಂಬಂಧ ಕಂಡು ಹಿಡಿಯಲು ಚಾಣಾಕ್ಷ ಮಾವನಿಗೆ ಹೆಚ್ಚು ಸಮಯ ಬೇಕಾಗಿರಲಿಲ್ಲ. ಸಿನಿಮಾ ನೋಡಿದ ಮಾರನೆಯ ದಿನ ಅವನನ್ನು ಹಿಡಿದು ಮರಕ್ಕೆ ಕಟ್ಟಿ ಬಡಿಯುತ್ತಿದ್ದ. ತೆಂಗಿನಕಾಯಿ ಮೇಲೆ ಕೈಯಿಟ್ಟು ಮತ್ತೊಮ್ಮೆ ಕದಿಯದಿರಲು ಆಣೆ ಮಾಡಿಸುತ್ತಿದ್ದ. ಆದರೆ ರಾಜ್ ಕುಮಾರ್ ಸಿನಿಮಾ ಬರುವುದು ತಪ್ಪಲಿಲ್ಲ. 'ತೆರೆದ ರಹಸ್ಯ'ದಂತಿದ್ದ ಕಳ್ಳತನ ನಿಲ್ಲಲಿಲ್ಲ. ತೋಟದ ಮರಗಳಿಗೆ ಬಾಯಿ ಬರುವಂತಿದ್ದರೆ ರಾಜ್ ಕುಮಾರರ ಯಾವ ಸಿನಿಮಾ ನೋಡಲು ತಮ್ಮನ್ನು ಏರಿ ರಾಮ ಕಾಯಿ ಕದ್ದ ಎಂಬ ಕತೆಯನ್ನು ಹೇಳುತ್ತಿದ್ದವೇನೋ! ಈಗ ಮೂರು ಮಕ್ಕಳ ತಂದೆಯಾಗಿ ಒಂದು ಮೊಮ್ಮಗುವಿಗೆ ತಾತನಾಗಿರುವ 'ಯಾಡ್ರಾಮಣ್ಣ' ಉದಯ ಮೂವೀಸ್ ಚಾನಲ್ನಲ್ಲಿ A
ಹಳೆಯ ರಾಜ್ ಕುಮಾರ್ ಚಿತ್ರ ಬಂತೆಂದರೆ ಬೆಳಗಿನ ಕೆಲಸಕ್ಕೆ ಎಳ್ಳುನೀರು ಬಿಟ್ಟು ದೃಶ್ಯಪೆಟ್ಟಿಗೆಯ ಮುಂದೆ ಕೂರುತ್ತಾನೆ!
ಇದು ಮತ್ತೊಂದು ಅಂಥದೇ ಹಳ್ಳಿ, ಹೆಸರು ಚಿಕ್ಕೀರಮ್ಮ ಎಪ್ಪತ್ತರ ದಶಕದಲ್ಲಿ ಆಕೆಗೆ ಆಗಲೇ ಇಬ್ಬರು ಸೊಸೆಯಂದಿರು. ಗುರುವಾರ ಸಂತೆಗೆ ಹೋಗುವ ಚಿಕ್ಕೀರಮ್ಮನಿಗೆ ಪಟ್ಟಣದ ಟೆಂಟಿನಲ್ಲಿ ರಾಜ್ ಕುಮಾರ್ ಸಿನಿಮಾ ಪ್ರದರ್ಶನಕ್ಕೆ ಬಂದಿದ್ದರೆ ಎಂಥದೋ ತಳಮಳ, ಎರಡು ಗಂಟೆಗೆಲ್ಲ ಬೆಣ್ಣೆ ಮಾರಿ ಬಂದ ಹಣದಲ್ಲಿ ಸಾಮಾನು ಕೊಂಡು ಗೂಡೆಯನ್ನಿಟ್ಟುಕೊಂಡೇ ಮ್ಯಾಟ್ರಿಗೆ ಹಾಜರಾಗುತ್ತಿದ್ದಳು. ಹೊಸದಾಗಿ ಮದುವೆಯಾದ ಸೊಸೆಯಂದಿರಿಗೂ ಸಿನಿಮಾ ಹುಚ್ಚು. ಗಂಡಂದಿರನ್ನು ಕಾಡಿಬೇಡಿ ಎರಡನೇ ಷೋಗೆ ಹೊರಡಿಸುತ್ತಿದ್ದರು. ಬೆಳಗ್ಗೆ ಸೊಸೆಯಂದಿರು ಏಳುವುದು ತಡವಾದರೆ ಚಿಕ್ಕೀರಮ್ಮನ ಭರ್ತನೆ ಅಕ್ಕಪಕ್ಕದ ಮನೆಯವರಿಗೆ ಕೇಳುತ್ತಿತ್ತು. 'ಗೊಂತಲ್ಲಿರೋ ಎಮ್ಮೆ ಕಟ್ಟಿಹಾಕಿ, ಕಸ ಯಾರ್...? ಯಾರು...? ಇವರಪ್ಪನ ಮನೆ ಆಳು ಬಂದು ಗುಡಿಸ್ತಾನಾ? ಆ ರಾಜ್ ಕುಮಾರ್ ಏನಾದ್ರು ಬಂದ್ ಕರುದ್ರೆ ಅವನ ಹಿಂದೆ ಹೋಗೋಕೂ ಹೇಸೋರಲ್ಲ ಈ ಕಳ್ಳ ಮುಂಡೇರು. ಅದೇನ್ ಕಂಡಿದ್ದಾರೋ ಅವನತ್ತ, ನಾ ಬೇರೆ ಕಾಣೆ' ಎಂದು ಪುಂಖಾನುಪುಂಖವಾಗಿ ಸೊಸೆಯಂದಿರನ್ನು ತರಾಟೆ ತೆಗೆದುಕೊಳ್ಳುತ್ತಿದ್ದಳು. ಅದೇನು ಸೊಸೆಯರನ್ನು ನಿಂದಿಸುತ್ತಿದ್ದ ಪರಿಯೋ? ಅವಳ ಅಂತರಂಗದ ಅಭೀಷ್ಟೆಯೋ? ತನ್ನನ್ನೆ ತಾನು ವಿಶ್ಲೇಷಿಸಿಕೊಳ್ಳುತ್ತಿದ್ದ ರೀತಿಯೋ? ಅರ್ಥವಾಗುತ್ತಿರಲಿಲ್ಲ.
ಮತ್ತೊಂದು ಪ್ರಸಂಗ ಹೀಗಿದೆ. ತರೀಕೆರೆಗೆ ಸುಮಾರು ಹದಿನಾಲ್ಕು ಕಿಲೋಮೀಟರ್ ದೂರದಲ್ಲೊಂದು ಲಂಬಾಣಿ ತಾಂಡ. ಆ ಊರಿನ ಯುವಕ ರಾಮಾ ನಾಯಕ್. ತರೀಕೆರೆ ಟೆಂಟಿನಲ್ಲಿ ರಾಜ್ ಕುಮಾರ್ ಸಿನಿಮಾ ಪ್ರದರ್ಶನ ಕಾಣುತ್ತಿದೆ ಎಂಬ ವಿಷಯ ತಿಳಿದ ತಕ್ಷಣ ಜೊತೆಯ ಹುಡುಗರನ್ನು ಸೇರಿಸಿಕೊಂಡು ಎರಡನೇ ಷೋಗೆ ರೆಡಿಯಾಗುತ್ತಿದ್ದ. ಕಾಳುಕಡ್ಡಿ, ಮಾಗಿ ಒಣಗಿರುವ ರಾಗಿ ತೆನೆಗಳನ್ನು ಮುಸ್ಸಂಜೆಯ ಬೆಳಕಿನಲ್ಲಿ ಕತ್ತರಿಸಿ, ಅರೆಕಲ್ಲಿನ ಮೇಲೆ ಚಚ್ಚಿ ರಾಗಿ ಮಾಡಿ ತನ್ನ ತಾಯಿಗೇ ಮಾರಿ ಹಣ ಕೂಡಿಸಿಕೊಳ್ಳುತ್ತಿದ್ದ. ಹದಿನಾಲ್ಕು ಕಿ.ಮೀ. ದೂರ ಗೆಳೆಯರೊಡನೆ ನಡೆದು ಎರಡನೇ ಷೋ ನೋಡಿದ ನಂತರ ತಾವು ಹಿಂದಿರುಗಬೇಕಾದ ಹಾದಿಯ ದುರ್ಗಮ ಸ್ವರೂಪ ನೆನಪಾಗುತ್ತಿತ್ತು. ಮಲೆನಾಡಿನ ಅಂಚಿನ ಆ ದಾರಿಯಲ್ಲಿ ಎದುರಾಗಬಹುದಾದ ಹಂದಿ, ಹಾವು, ಚಿರತೆಗಳನ್ನು ' ನೆನೆದು ತರೀಕೆರೆಯ ಅಂಗಡಿ ಸಾಲಲ್ಲಿ ಎಲ್ಲೋ ಒಂದು ಕಡೆ ಮಲಗಿ ಮುಂಜಾನೆ ಎದ್ದು ಊರಿಗೆ ಹೊರಡುತ್ತಿದ್ದರು. ತಮ್ಮ ಮಕ್ಕಳ ಸಾಹಸವನ್ನು ಸರಿಯಾಗಿ ಊಹಿಸಿದ್ದ ಇತರ ಹುಡುಗರ ತಾಯಂದಿರು ಊರ ಬಾಗಿಲಲ್ಲೇ ಮಂಗಳಾರತಿ ಎತ್ತಿ ಒಳ ಬಿಡುತ್ತಿದ್ದರು. ತಾನೂ ಹಾಳಾಗುವುದಲ್ಲದೆ ತಮ್ಮ ಮಕ್ಕಳನ್ನು ಹಾಳುಗೆಡುವುತ್ತಿದ್ದಾನೆಂದು ರಾಮಾ ನಾಯಕ್ ಮನೆಯವರ ಹತ್ತಿರ ದೂರು
ಹೇಳುತ್ತಿದ್ದರು ಸ್ವಾಭಿಮಾನಿಯಾದ
ತಂದೆಯಿಂದ ರಾಮ ನಾಯಕ್ಗೆ ಹೇಳುತ್ತಿದ್ದರು. ಸ್ವಾಭಿಮಾನಿಯಾದ ಕಪಾಳಮೋಕ್ಷ. ಇನ್ನು ಮುಂದೆ ಹೀಗೆ ಮಾಡಬಾರದೆಂದು ಭಯಂಕರ ಪ್ರತಿಜ್ಞೆ ಮಾಡುತ್ತಿದ್ದ ನಾಯಕ್ ಮತ್ತೊಂದು ರಾಜ್ ಚಿತ್ರ ಬಿಡುಗಡೆಯಾಯಿತೆಂದರೆ ಹಳೆಯ ನೋವೆಲ್ಲ ಮರೆತು ಹೊಸ ಸಾಹಸಕ್ಕೆ ಸಿದ್ಧವಾಗುತ್ತಿದ್ದರು. ರಾಜ್ ಚಿತ್ರಗಳ ಮೋಹಕ್ಕೆ ಬಿದ್ದ ಆತ ಉದ್ಧಾರವಾಗುವ ಕೇಸಲ್ಲ ಎಂಬುದು ಊರವರ ನಂಬಿಕೆ. ಆದರೆ ಈಗ ಆತ ಕರ್ನಾಟಕ ಸರ್ಕಾರದಲ್ಲಿ ಅಧಿಕಾರಿ!
***
ಕೆಮ್ಮಣ್ಣುಗುಂಡಿಯಲ್ಲಿ ಯಾವುದೋ ಒಂದು ಚಿತ್ರದ ಚಿತ್ರೀಕರಣ (ಬಹುಶಃ ' 'ಪ್ರೇಮದ ಕಾಣಿಕೆ' ಇರಬೇಕು). ರಾಜ್ ಅವರನ್ನು ನೋಡಲು ಜನ ತಂಡೋಪತಂಡವಾಗಿ ಬಂದಿದ್ದರು. ಅವರಲ್ಲಿ ಇತ್ತೀಚೆಗೆ ಮದುವೆಯಾದ ಒಂದು ಜೋಡಿ, ಚಿತ್ರೀಕರಣದ ವಿರಾಮದ ವೇಳೆಯಲ್ಲಿ ಆ ಜೋಡಿಯ ಗಂಡ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ರವರ ಬಳಿ ಒಂದು ಬೇಡಿಕೆಯಿಟ್ಟ. 'ಅಮಾವ, ನನ್ನ ಮದುವೆ ಇತ್ತೀಚೆಗೆ ತಾನೇ ಆಗಿದೆ. ನನ್ನ ಹೆಂಡತಿಗೆ ನಿನ್ನ ಬದುಕಿನಲ್ಲಿ ದೊಡ್ಡ ಆಸೆ ಏನು ಎಂದು ಕೇಳಿದೆ. ಪೂರೈಸುವುದಾದರೆ ಹೇಳುತ್ತೀನಿ ಅಂತಾ ಪ್ರಾಮಿಸ್ ತೆಗೆದುಕೊಂಡಳು. ಆಕೆಗೆ ಒಮ್ಮೆ ರಾಜ್ ಕುಮಾರ್ರವರನ್ನು ಆಲಂಗಿಸಿಕೊಳ್ಳಬೇಕಂತೆ. ದಯಮಾಡಿ ಅವಕಾಶ ಮಾಡಿಕೊಡಿ'. ಇದು ಸ್ವತಃ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ರವರು ನೀಡಿದ ಉದಾಹರಣೆ.
ಆಗ ತಾನೆ 'ಶಂಕರ್ ಗುರು' ಚಿತ್ರ ಬಿಡುಗಡೆಯಾಗಿತ್ತು. ನಮ್ಮ ಗೆಳೆಯ ಚಂದ್ರೇಗೌಡನಿಗೂ ಮದುವೆಯಾಗಿತ್ತು. 'ಫಸ್ಟ್ ನೈಟ್ ಹೇಗಿತ್ತು?' ಎಂದು ಕಿಚಾಯಿಸಿದಾಗ ಆತ ಖಿನ್ನನಾದ. ನಮ್ಮ ಗೆಳೆಯ, ಸಹಪಾಟಿ ಚಂದ್ರ ಸ್ವಲ್ಪ ಐಲು. ವಿಚಿತ್ರಸಾಹಸಗಳಿಗೆ ಎತ್ತಿದ ಕೈ. ರಾಜ್ ಅಂದ್ರೆ ಪ್ರಾಣ. ಯಾಕೆಂದರೆ ತಾನು ಹುಟ್ಟಿದ ಊರಿನ ಆಳಿಯ ರಾಜ್ ಎಂದು ಅಪಾರ ಹೆಮ್ಮೆ. ಏನು ಅನಾಹುತ ಮಾಡಿಕೊಂಡನೋ ಎಂಬ ಆತಂಕ. ನಡೆದ ವಿಷಯ ಇಷ್ಟೆ ಶೋಬನದ ರಾತ್ರಿ ಐಲು ಜಾಗೃತವಾಗಿತ್ತು. ಅಂದು ಸಜ್ಜೆ ಮನೆಗೆ ಹೆಂಡತಿ ಪ್ರವೇಶಿಸಿದ ತಕ್ಷಣ ಈತ ಮಂಚದ ಪಕ್ಕದಲ್ಲಿ ಹಣ್ಣು ತುಂಬಿದ ತಟ್ಟೆಯನ್ನು ಎತ್ತಿ ಜಾಡಿಸಿದನಂತೆ. ಹಣ್ಣೆಲ್ಲ ರೂಮಿನ ತುಂಬಾ ಹರಡಿದವು. ಹೆಂಡತಿಗೆ ಗಾಬರಿ, ತಕ್ಷಣವೇ ತಟ್ಟೆಯನ್ನು ಗುರಾಣಿಯಂತೆ ಹಿಡಿದು 'ಶಂಕರ್ಗುರುನಲ್ಲಿ ಪದ್ಮಪ್ರಿಯ ಹಣ್ಣು ಹೊಡೀತಾಳಲ್ಲ, ಹಾಗೆ ಎಸಿ. ಶಂಕರ್ಗುರು ಆಟ ಆಡೋಣ' ಎಂದನಂತೆ. ತನ್ನ ಗಂಡನ ತಿಕ್ಕಲು ಸಾಹಸಗಳು ಸ್ವಲ್ಪ ತಿಳಿದಿತ್ತೋ ಏನೋ? ಹುಚ್ಚು ಹಿಡಿದಿದೆ ಎಂದು ತಿಳಿದು ಆಕೆ ರಾತ್ರಿಪೂರ್ತಿ
ಅತ್ತಳಂತೆ. ಗೆಳೆಯನಿಗೆ ತನಗಿರುವ ರಾಜ್ ಕುಮಾರ್ ಹುಚ್ಚನ್ನು ಹೆಂಡತಿಗೆ ಮನವರಿಕೆ ಮಾಡಿಕೊಡುವಲ್ಲಿ ಸುಸ್ತಾಗಿದ್ದ!
ಇವು ಮುತ್ತುರಾಜ ಎಂಬ ಅಪ್ಪಟ ಹಳ್ಳಿಮೂಲದ ಮನುಷ್ಯ ರಾಜ್ ಕುಮಾರ್ ಎಂಬ ಹಲಬಗೆಯ ವೇಷತೊಟ್ಟು ಕನ್ನಡ ಜನಮಾನಸವನ್ನು ಆಕರ್ಷಿಸಿದ ರೀತಿಗೆ, ಪ್ರಭಾವಿಸಿದ ಪರಿಗೆ ಕೆಲವು ಉದಾಹರಣೆಗಳು, ಸ್ಪಷ್ಟವಾಗಿ ಹೇಳಬೇಕೆಂದರೆ ಸ್ವಾತಂತ್ರ್ಯಾನಂತರ, ವಿಶೇಷವಾಗಿ ಕನ್ನಡದ ಏಕೀಕರಣದ ನಂತರ ಐದು ದಶಕಗಳ ಕಾಲ ಕನ್ನಡಿಗರ ಭಾವಕೋಶದಲ್ಲಿ ಡಾ. ರಾಜ್ ಕುಮಾರ್ ಬೆಳೆದು ನೆಲೆಯಾದ ಬಗೆಗಿನ ಕೆಲವು ಪ್ರಾತಿನಿಧಿಕ ದೃಷ್ಟಾಂತಗಳು.
ಬಹುವೇಷಧಾರಿ ರಾಜ್ಕುಮಾರ್ ಎಂಬ ಕಿಂದರಿಜೋಗಿಯ ಮೋಡಿಗೆ ಸಿಲುಕಿದ ಈ ಮನಸ್ಸುಗಳು ಹಳ್ಳಿ-ನಗರಗಳಲ್ಲಿವೆ. ಜಾತಿಮತದ ಹಂಗನ್ನು ತೊರೆದಿವೆ. ಲಿಂಗಭೇದವನ್ನು ದಾಟಿವೆ. ವಯೋಮಾನದ ತರತಮವನ್ನು ಮೀರಿವೆ. ಕನ್ನಡ ಭಾಷೆಯ ಸಮಾನ ಅಂಶವೊಂದನ್ನು ಬಿಟ್ಟರೆ ಭಿನ್ನ ಭೌಗೋಳಿಕ ಪ್ರದೇಶ. ಹಲಬಗೆಯ ಹಿನ್ನೆಲೆಗಳ ಎಲ್ಲರನ್ನೂ ರಾಜ್ ತಲುಪಿದ್ದಾರೆ. ಅವರ ಬದುಕನ್ನು ಅಂತರಂಗವನ್ನು ಪುಲಕಗೊಳಿಸುತ್ತಾ ಅನುಭವಗಳನ್ನು ತಟ್ಟುತ್ತಾ. ವಿಸ್ತರಿಸಿದ್ದಾರೆ. ಜನರ ಜೀವನೋತ್ಸಾಹವನ್ನು ಬತ್ತದ ಸೆಲೆಯನ್ನಾಗಿಸಿದ್ದಾರೆ. ಅವರ
ಅಷ್ಟೇ ಅಲ್ಲ, ರಾಜ್ ಕುಮಾರ್ ಅವರ ಬದುಕು ತಮ್ಮದೇ ಆಗಿದೆ. ಆಗಬೇಕು ಎಂದು ಜನಸಮುದಾಯ ಭ್ರಮಿಸಿತ್ತು. ಅವರ ಸಾಧನೆ, ಸಿದ್ದಿಗಳು ತಮ್ಮವೇ ಎಂಬಷ್ಟು ಮಟ್ಟಿಗೆ ಪುಳಕಗೊಂಡು ವರ್ತಿಸಿತ್ತು. ಅಷ್ಟೇ ಏಕೆ ಅವರ ನಿಧನಾನಂತರ ಅವರ ಪಾರ್ಥೀವ ಶರೀರ ತಮ್ಮದು, ಅವರ ಅಂತ್ಯಸಂಸ್ಕಾರವೂ ಕನ್ನಡ ಜನತೆಗೇ ಸೇರಿದ್ದು ಎಂಬ ಮಟ್ಟಕ್ಕೆ ಅತಿರೇಕ ಪ್ರದರ್ಶಿಸಿತು.
ರಾಜ್ಕುಮಾರ್ ಅವರು ಕನ್ನಡ ಜನಮಾನಸದ ಮೇಲೆ ಬೀರಿದ ಈ ಪರಿಯ ಪ್ರಭಾವದ ಹಿಂದಿನ ಗುಟ್ಟೇನು? ಐದು ದಶಕಗಳ ಕಾಲ ಹೊಟ್ಟೆಪಾಡಿಗಾಗಿ ಜನರಂಜನೆಯನ್ನೆ ವೃತ್ತಿ ಬದುಕಾಗಿ ಸ್ವೀಕರಿಸಿದ ತೆರೆಯಿಂದಾಚೆಗಿನ ವ್ಯಕ್ತಿತ್ವವೇ? ಅಥವಾ ಇನ್ನೇನು? ಅವರು ನಿಸ್ಸಂದೇಹವಾಗಿ ಕನ್ನಡಿಗರ ಜನನಾಯಕ ಎಂಬುದನ್ನು ತಡವಾಗಿಯಾದರೂ ಈಗ ಎಲ್ಲರೂ ಒಪ್ಪುವ ಸ್ಥಿತಿಗೆ ತಲುಪಿದ್ದಾರೆ. ಆದರೆ ರಾಜ್ ಕುಮಾರ್ ಜನನಾಯಕರಾಗಲು ಹಿನ್ನೆಲೆಯೇನು? ಇದ್ದ
ಈ ಮಾತಿಗೆ ರಾಜ್ಕುಮಾರ್ರವರಿಗೆ ಪದ್ಮಭೂಷಣ ಪ್ರಶಸ್ತಿ ದೊರಕಿದ ಸಮಯದಲ್ಲಿ ಪ್ರಸಿದ್ಧ ಭಾಷಾತಜ್ಞ ಮತ್ತು ವಿಮರ್ಶಕ ಡಾ. ಕೆ.ವಿ. ನಾರಾಯಣ ಅವರು ರಾಜ್ರವರನ್ನು ಕುರಿತು ಬರೆದ ಲೇಖನ ನೆನಪಾಗುತ್ತದೆ. "ಯಾರು ಒಪ್ಪಲಿ, ಬಿಡಲಿ ಸಮುದಾಯಗಳಿಗೆ ನಾಯಕರು ಬೇಕು... ಆದರೆ ಈ ನಾಯಕರು ಹೇಗೆ
ರೂಪುಗೊಳ್ಳುತ್ತಾರೆ ಅಥವಾ ಸಮುದಾಯ ನಾಯಕನನ್ನು ಹೇಗೆ ಗುರುತಿಸಿಕೊಳ್ಳುತ್ತದೆ ಎಂಬುದು ಸರಳ ವ್ಯಾಖ್ಯೆಗೆ, ಸುಲಭ ಗ್ರಹಿಕೆಗೆ ನಿಲುಕುವಂಥದ್ದಲ್ಲ... ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಭುತ್ವ ತನ್ನ ನಾಯಕನನ್ನು ಚುನಾವಣೆ ಮೂಲಕ ಆರಿಸಿಕೊಳ್ಳುತ್ತದೆ. ಈ ನಾಯಕರಲ್ಲಿ ಅಧಿಕಾರ ಕೇಂದ್ರೀಕರಣಗೊಳ್ಳುವುದನ್ನು ತಡೆಯಲೋ ಎಂಬಂತೆ ಅಧಿಕಾರ ಕೇಂದ್ರದಿಂದ ದೂರವಾದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮೂಹ ತನ್ನದೇ ಆದ ರೀತಿಯಲ್ಲಿ ನಾಯಕನನ್ನು ಗುರುತಿಸಿ ಅಪ್ಪಿಕೊಳ್ಳುತ್ತದೆ... (ಹಾಗಾಗಿ) ಸಾಹಿತ್ಯ, ಕಲೆ, ಕ್ರೀಡೆ, ಸಂಸ್ಕೃತಿಯ ಇತರ ಕ್ಷೇತ್ರಗಳಲ್ಲಿ ನಾಯಕರು ಮೈದಳೆಯುವಂತೆ ಮಾಡುತ್ತದೆ" ಎಂದು ರಾಜ್ರವರು ಜನನಾಯಕರಾದ ವಿಧಾನವನ್ನು ಗುರುತಿಸಿದ್ದರು.
ಈ ವ್ಯಾಖ್ಯಾನವನ್ನು ರಾಜ್ರವರ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಹಿನ್ನೆಲೆಯಲ್ಲಿ ನೋಡಿದಾಗ ಸರ್ವಸಮ್ಮತವೆಂಬಂತೆ ವೆಂಬಂತೆ ಕಾಣುತ್ತದೆ. ಸಾಮಾಜಿಕ ವ್ಯವಸ್ಥೆಯೊಂದನ್ನು ರಚಿಸಿಕೊಳ್ಳುವ ಎಲ್ಲ ಸಮುದಾಯಗಳು ತಮ್ಮ ವ್ಯವಸ್ಥೆಯ ನಿಯಂತ್ರಣಕ್ಕೆ ನಾಯಕನನ್ನು ಆರಿಸಿಕೊಳ್ಳುತ್ತವೆ. ಮನುಷ್ಯ ಸಮಾಜದ ಘಟಕಗಳಾದ ಕುಟುಂಬ, ರಾಜ್ಯವ್ಯವಸ್ಥೆ ಸಹ ನಾಯಕನನ್ನು ಅವಲಂಬಿಸಿರುತ್ತದೆ. ವಿಚಿತ್ರವೆಂದರೆ ಆ ನಾಯಕನ ಹುಟ್ಟಿನಲ್ಲಿಯೇ ಅದನ್ನು ವಿರೋಧಿಸುವ ಎದುರಾಳಿ ಇಲ್ಲವೇ ಪ್ರತಿನಾಯಕನ ಸೃಷ್ಟಿಯೂ ಇರುತ್ತದೆ. ಪ್ರಜಾತಂತ್ರ ವ್ಯವಸ್ಥೆ, ನಿಂತಿರುವುದೇ ಆಡಳಿತ-ವಿರೋಧ ಪಕ್ಷಗಳ ನೆಲೆಯಲ್ಲಿ. ಹಾಗೆ ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಮುದಾಯ ತನ್ನ ಆಶೋತ್ತರಗಳಿಗೆ ಮಿಡಿವ ಪ್ರತಿನಿಧಿಯನ್ನು ಸೀಮಿತ ಅವಧಿಗೆ ಆಯ್ದು ಕಳುಹಿಸಿಕೊಡುತ್ತದೆ. ಸೀಮಿತ ಅವಧಿಯಾದರೂ, ಜನಬೆಂಬಲ, ಅಧಿಕಾರ ಮತ್ತು ಪ್ರಭುತ್ವ ನೀಡುವ ಅಪಾರ ಶಕ್ತಿಯಿಂದ ಈ ನಾಯಕರ ನಿಯಂತ್ರಣ ಕಷ್ಟ ಸಾಧ್ಯ ಅಂತಹ ನಿರಂಕುಶ ಅಧಿಕಾರ ಕೇಂದ್ರವನ್ನು ತಡೆಯಲು ಜನಸಮೂಹ ತನ್ನದೇ ಸಾಂಸ್ಕೃತಿಕ ನಾಯಕನನ್ನು ಆರಿಸಿಕೊಳ್ಳುವ ಅನಿವಾರ್ಯ ಸಹಜ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಸ್ವಾಭಾವಿಕ ಕ್ರಿಯೆ. ಜೊತೆಗೆ ಅದು ಸಮುದಾಯದ ಮಾನಸಿಕ ಅಭೀಷ್ಟೆಗೆ ಮೂರ್ತ ರೂಪಕೊಡುವ ಕ್ರಿಯೆಯೂ ಆಗಿರುತ್ತದೆ. ಹೀಗೆ ಪಕ್ಷ ಪ್ರಣಾಳಿಕೆ ಜಾತಿ-ಮತಗಳನ್ನು ಮೀರಿದ ಸಮುದಾಯದ ಅಂತರಂಗದ ಅಭೀಷ್ಟೆಯ ನಾಯಕರನ್ನು ಜನಸಮೂಹ ಅಪ್ರಜ್ಞಾಪೂರ್ವಕವಾಗಿ ಆರಿಸಿಕೊಳ್ಳುತ್ತದೆ. ಜೊತೆಗೆ ಅದು ಇತಿಹಾಸದ ತುರ್ತು ಸಹ ಆಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಚುನಾವಣೆಯ ನಾಯಕರ ಆಯುಷ್ಯ ತೀರಾ ಅಲ್ಪವಾದರೆ, ಸಾಂಸ್ಕೃತಿಕ ನಾಯಕರು ನಿತ್ಯಸಚಿವರಾಗಿ ಕಂಗೊಳಿಸುತ್ತಾರೆ. ಅಧಿಕಾರ ಕೇಂದ್ರದಿಂದ ಹೊರಗುಳಿದರೂ ಈ ನಾಯಕರು ಹಲವು ವಿಧಗಳಲ್ಲಿ ಜನಮಾನಸವನ್ನು ಪ್ರಭಾವಿಸುವ ಅತುಳ ಸಾಮರ್ಥ್ಯ ಹೊಂದಿರುತ್ತಾರೆ. ಕುವೆಂಪು, ಕಾರಂತ, 'ಬೇಂದ್ರೆ, ಗಂಗೂಬಾಯಿ, ಮಲ್ಲಿಕಾರ್ಜುನ ಮನ್ಸೂರ್ ಮುಂತಾದವರು 'ನಿತ್ಯ ಸಚಿವ' ಮಂಡಲದ ಕೆಲವು ಉದಾಹರಣೆಗಳು.
ಕನ್ನಡಿಗರ ಜನನಾಯಕ ರಾಜ್ ಕುಮಾರ್ ಅವರು ಹೇಗೆ ಚಾರಿತ್ರಿಕ ಒತ್ತಡಗಳಿಂದ ಸಮುದಾಯದ ನಾಯಕರಾದರು ಎಂಬ ವಿಶ್ಲೇಷಣೆ ಬಹಳ ರಾಜ್ ಕುಮಾರ್ ಅವರು 'ಚಿತ್ರರಂಗಕ್ಕೆ ಕುತೂಹಲಕಾರಿಯಾದದ್ದು. ಏಕೆಂದರೆ ಕಾಲಿರಿಸಿದ ವೇಳೆಯಲ್ಲೇ ದಕ್ಷಿಣ ಭಾರತದ-ತೆಲುಗು ಮತ್ತು ತಮಿಳು- ಚಿತ್ರರಂಗದಲ್ಲಿ ಆದಾಗಲೇ ಸೂಪರ್ ಸ್ಟಾರ್ಗಳು ವಿಜೃಂಭಿಸುತ್ತಿದ್ದರು. ಅಲ್ಲಿನ ಮಾರುಕಟ್ಟೆಯೂ ವಿಸ್ತಾರವಾದುದಾಗಿತ್ತು. ಚಿತ್ರೋದ್ಯಮವೂ ಬೇರೂರಿತ್ತು. ಕನ್ನಡಕ್ಕೆ ಅಂಥ ಅವಕಾಶವಿದ್ದಿರಲಿಲ್ಲ. ಕನ್ನಡ ಪ್ರೇಕ್ಷಕ ವರ್ಗವೂ ತಮಿಳು, ತೆಲುಗು ಚಿತ್ರಗಳ ಜೊತೆಯಲ್ಲೇ ಬೆಳೆದವರು. ಇಂಥ ಸನ್ನಿವೇಶದಲ್ಲಿ ರಾಜ್ಕುಮಾರ್ ಅವರು 1954ರಲ್ಲಿ 'ಬೇಡರ ಕಣ್ಣಪ್ಪ' ಮೂಲಕ ನಾಯಕನಾಗಿ ತೆರೆಗೆ ಬಂದರು.
ಹೆಚ್ಚು ಕಡಿಮೆ ಕರ್ನಾಟಕ ಏಕೀಕರಣ ಚಳುವಳಿ ಕಾವೇರಿದ್ದಾಗಲೇ ಡಾ. ರಾಜ್ ಚಲನಚಿತ್ರರಂಗ ಪ್ರವೇಶಿಸಿದ್ದೂ ಒಂದು ವಿಶಿಷ್ಟ ಚಾರಿತ್ರಿಕ ಘಟನೆ. ಹರಿದು ಹಂಚಿಹೋಗಿದ್ದ ನಾಡನ್ನು ಒಂದುಗೂಡಿಸಬೇಕೆಂಬ ಕನಸನ್ನು ಬಿತ್ತಿದವರೂ ಸಾಂಸ್ಕೃತಿಕ ನಾಯಕರೇ. ಆದರೆ ಕನ್ನಡ ಜನಸಮೂಹವನ್ನು ಏಕಕಾಲಕ್ಕೆ ತಲುಪಬಲ್ಲ ಅಪೂರ್ವ ಸಂವಹನ ಮಾಧ್ಯಮವಾದ ಸಿನಿಮಾ ಸಹ ಕನ್ನಡಿಗರನ್ನು ಒಂದು ಬಗೆಯಲ್ಲಿ ಒಗ್ಗೂಡಿಸಿತು ಎಂದರೆ ತಪ್ಪಾಗಲಾರದು. ಅಲ್ಲದೆ ಸಂತರ ಪರಂಪರೆಯನ್ನು ಪೋಷಿಸಿದ ಕರ್ನಾಟಕದಲ್ಲಿ ಮೊದಲ ಬಾರಿಗೆ ಬೇಡರ ಕಣ್ಣಪ್ಪನ ತಾಜಾ ಅಭಿನಯವನ್ನು ಕಂಡ ಕನ್ನಡ ಜನಮಾನಸ ಅಪ್ರಜ್ಞಾಪೂರ್ವಕವಾಗಿ ರಾಜ್ ಅವರನ್ನು ನಾಯಕನನ್ನಾಗಿ ಆರಿಸಿಕೊಂಡಿತ್ತು ಎಂಬುದಕ್ಕೆ ಮುಂದೆ ಹಲವಾರು ದೃಷ್ಟಾಂತಗಳು ಸಿಗುತ್ತವೆ. ರಾಜ್ ಅವರು ಕನ್ನಡ ಜನಮಾನಸದ ಪ್ರಾತಿನಿಧಿಕ ಮೂರ್ತರೂಪವಾಗಿದ್ದರು. ಸದೃಢವಾದ ಕನ್ನಡಭಾಷೆಯ ಮೇಲಿನ ಅಪೂರ್ವ ಹಿಡಿತ, ತೆರೆಯಾಚೆಗಿನ ಸೌಜನ್ಯಪೂರ್ಣ ವರ್ತನೆಯಲ್ಲಿ ಕನ್ನಡ ಜನತೆ ತನ್ನ ನಾಯಕನನ್ನು ಕಂಡುಕೊಂಡಿತು. ಅವರು ಕನ್ನಡದ ಪೌರಾಣಿಕ ಮತ್ತು ಚಾರಿತ್ರಿಕ ಚಿತ್ರಗಳ ಪಾತ್ರಗಳಲ್ಲಿ ರಾಜ್ ಅವರನ್ನೇ ಕಾಣುತ್ತಾಹೋದರು. ಶರೀರ, ಸುಂದರವಾದ
ಈ ಪ್ರಭಾವ ಎಷ್ಟರಮಟ್ಟಿಗಿದೆಯೆಂದರೆ, ಈಗಲೂ ಕೃಷ್ಣದೇವರಾಯ, ಕನಕದಾಸ, ಸಂಗೊಳ್ಳಿ ರಾಯಣ್ಣ, ಮಂತ್ರಾಲಯದ ರಾಘವೇಂದ್ರ ಸ್ವಾಮಿ, ಕೆಂಪೇಗೌಡ, ಕಂಠೀರವ, ಪುರಂದರದಾಸರಂಥ ಚಾರಿತ್ರಿಕ ವ್ಯಕ್ತಿಗಳ ಚಿತ್ರಗಳನ್ನು ಅವರನ್ನೇ ಅಪ್ರಜ್ಞಾಪೂರ್ವಕವಾಗಿ ಬರೆಯುವ ಕಲಾವಿದರು ಮಾಡಿಕೊಂಡಿದ್ದಾರೆನಿಸುತ್ತದೆ.
ಎರಡನೆಯ ಚಾರಿತ್ರಿಕ ಒತ್ತಡ ಸೃಷ್ಟಿಯಾದದ್ದು 1961ರಲ್ಲಿ. ವಿಶಾಲ ಕರ್ನಾಟಕ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಕಾಲ. ನೆರೆ ಸಂತ್ರಸ್ತರ ಬದುಕು
ಮೂರಾಬಟ್ಟೆಯಾಗಿತ್ತು. ಅಂತಹ ಜನರ ನೆರವಿಗೆ ಕನ್ನಡ ಚಿತ್ರೋದ್ಯಮವೇ ಧಾವಿಸಿತು. ನಾಡಿನಾದ್ಯಂತ ರಸಮಂಜರಿ ಕಾರ್ಯಕ್ರಮ ನೀಡಿ ಹಣ ಸಂಗ್ರಹಿಸಿತು. ಕಲಾವಿದರು ಬೀದಿಬೀದಿಯಲ್ಲಿ ಓಡಾಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದರು.
ಗುಬ್ಬಿ ವೀರಣ್ಣನವರಿಂದ ಹಿಡಿದು ರಾಜ್. ಉದಯ್, ಕಲ್ಯಾಣ್, ಪಂತುಲು, ಲೀಲಾವತಿ- ಹೀಗೆ ಇಡೀ ಚಿತ್ರ ಪಂಡರೀಬಾಯಿ, ಹರಿಣಿ, ಸಂಧ್ಯಾ, ಕಲಾವಿದರೆಲ್ಲರೂ ಈ ಕಾರ್ಯದಲ್ಲಿ ತೊಡಗಿಸಿಕೊಂಡರು. ಕಲಾವಿದರ ಬಗ್ಗೆ ಜನರಲ್ಲಿ ವಿಚಿತ್ರವಾದ ವಿಶ್ವಾಸ, ಪ್ರೀತಿ, ಒಲವು ಬೆಳೆಯಿತು. ಪರಿಣಾಮ, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಯಿತು. ಚಿತ್ರೋದ್ಯಮದ ಚಟುವಟಿಕೆಗಳೂ ಹೆಚ್ಚಾದವು. ಆದರೆ ಈ ಹೆಚ್ಚಿದ ಚಟುವಟಿಕೆಗಳನ್ನು ವಿಶ್ಲೇಷಿಸಿದರೆ, ಜನ ರಾಜ್ರವರನ್ನು ಹೆಚ್ಚು ಅಂಗೀಕರಿಸಿದ್ದು ಹಾಗೂ ತಮ್ಮ ಸಾಂಸ್ಕೃತಿಕ ನಾಯಕನೆಂದು ಗುರುತಿಸಿಕೊಂಡಿದ್ದು ಸ್ಪಷ್ಟವಾಗಿತ್ತು. ಏಕೆಂದರೆ 1961ರ ಅಂತ್ಯದವರೆಗೆ ತೆರೆಕಂಡ ಕನ್ನಡ ಚಿತ್ರಗಳ ಒಟ್ಟು ಸಂಖ್ಯೆ 113 ಮಾತ್ರ ಅದರ ಮುಂದಿನ ಹತ್ತು ವರ್ಷಗಳಲ್ಲಿ ಆ ಸಂಖ್ಯೆ 370ಕ್ಕೇರಿತು. 1961ರ ಅಂತ್ಯಕ್ಕೆ ರಾಜ್ರವರು ಏಳು ವರ್ಷಗಳಲ್ಲಿ ಹದಿನೇಳು ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದರು. ಮುಂದಿನ ಹತ್ತು ವರ್ಷಗಳಲ್ಲಿ ನೂರ ಇಪ್ಪತ್ತೊಂದು ಚಿತ್ರಗಳಲ್ಲಿ ಅಭಿನಯಿಸಿದ್ದರು. 1961ರಿಂದ 1970ರ ಅವಧಿಯಲ್ಲಿ ಬಿಡುಗಡೆಯಾದ ಪ್ರತಿ ಎರಡು ಚಿತ್ರಗಳಲ್ಲಿ ಒಂದು ರಾಜ್ ಅಭಿನಯದ ಚಿತ್ರವೇ ಆಗಿತ್ತು. 1968ರಲ್ಲಿ ಒಂದೇ ವರ್ಷದಲ್ಲಿ ರಾಜ್ ನಾಯಕರಾಗಿದ್ದ ಹದಿನಾರು ಚಿತ್ರಗಳು ತೆರೆಕಂಡಿದ್ದವು. ಈ ಅವಧಿಯಲ್ಲಿ ಎಲ್ಲಾ ಬಗೆಯ ಪಾತ್ರಗಳಲ್ಲೂ ಅಭಿನಯಿಸಿದ್ದ ರಾಜ್ ಕನ್ನಡಿಗರ ಮನಸ್ಸಿನಲ್ಲಿ ಭದ್ರ ಸೌಧವನ್ನು ಕಟ್ಟಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ನೋಡಿದಾಗ ಜನತೆ ರಾಜ್ರವರನ್ನು ತಮ್ಮ ಸಾಂಸ್ಕೃತಿಕ ನಾಯಕ ಎಂದು ಅಂಗೀಕರಿಸಿದ್ದು ಕಂಡುಬರುತ್ತದೆ. ಅದೇ ರೀತಿ ರಾಜ್ರವರು ಚಿತ್ರರಂಗಕ್ಕೆ ಒಂದು ಒಳಬಲವನ್ನೂ ನೀಡಿ ಮಾರುಕಟ್ಟೆಯನ್ನು ವಿಸ್ತರಿಸಿದ್ದು ಇದೇ ಅವಧಿಯಲ್ಲಿ
ಮೂರನೆಯ ಸನ್ನಿವೇಶ ಸೃಷ್ಟಿಯಾದದ್ದು 19825 ಗೋಕಾಕ್ ಚಳುವಳಿಯಲ್ಲಿ, ಶಿಕ್ಷಣದಲ್ಲಿ ಪ್ರೌಢಶಾಲಾ ವ್ಯಾಸಂಗದವರೆಗೆ ಕನ್ನಡವೇ ಪ್ರಥಮ ಭಾಷೆಯಾಗಿರಬೇಕೆಂದು ಪ್ರೊ: ವಿ.ಕೆ. ಗೋಕಾಕ್ ಅವರ ನೇತೃತ್ವದಲ್ಲಿ ರಚಿತವಾದ ಸಮಿತಿಯು ನೀಡಿದ ವರದಿಯನ್ನು ಜಾರಿಗೊಳಿಸಬೇಕೆಂದು ಆರಂಭವಾದ ಚಳುವಳಿ ಕರ್ನಾಟಕಕ್ಕೆ ವಿಸ್ತರಿಸಿದ್ದು ರಾಜ್ರವರು ಹೋರಾಟದ ಕಣಕ್ಕೆ ಧುಮುಕಿದ ನಂತರ. ಅಲ್ಲಿಯವರೆಗೂ ಮಧ್ಯಮ ವರ್ಗದ ಅಷ್ಟೇನೂ ನೂ 'ಸುಶಿಕ್ಷಿತ' ವರ್ಗಕ್ಕೆ ಸೇರದ ಜನ ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ರಾಜ್ ವ್ಯಕ್ತಿತ್ವ ಕನ್ನಡದ ಬುದ್ದಿಜೀವಿ ವರ್ಗಕ್ಕೂ ಪರಿಚಯವಾಗಿದ್ದು ಈ ಅವಧಿಯಲ್ಲಿ ಅದುವರೆಗೂ - ಕುರುಡಾಗಿದ್ದ ಈ ಸುಶಿಕ್ಷಿತ ವರ್ಗ ರಾಜ್ ಜನಪ್ರಿಯತೆಯನ್ನು ಕಂಡು ದಂಗುಬಡಿದು ಹೋಯಿತು. ಜೊತೆಗೆ ರಾಜ್ರವರ ಜನಪ್ರಿಯತೆಯೂ ನವೀಕರಣಗೊಂಡ ಕಾಲಘಟ್ಟವದು.
ಗೋಕಾಕ್ ಚಳವಳಿ ಮುಗಿದ ನಂತರ ಊಟಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ರಾಜ್ರವರ ಮೇಲೆ ಕೆಲವು ಕಿಡಿಗೇಡಿಗಳಿಂದ ಹಲ್ಲೆಯಾಯಿತು. ಅದನ್ನು ಕನ್ನಡದ ಬಗ್ಗೆ ರಾಜ್ ರವರು ತೋರಿದ ಕಡುನಿಷ್ಠೆಯ ವಿರುದ್ಧದ ಪ್ರತಿಕ್ರಿಯೆ ಎಂದು ಕನ್ನಡ ಜನತೆ ಭಾವಿಸಿತು. ಇದೇ ಘಟನೆ ರಾಜ್ರವರು ಮದರಾಸನ್ನು ತೊರೆದು ಕನ್ನಡ ನಾಡಿನಲ್ಲೇ ಪೂರ್ಣ ಪ್ರಮಾಣದಲ್ಲಿ ನೆಲೆಯಾಗಲು ಕಾರಣವಾಯಿತು.
ಈ ಚಾರಿತ್ರಿಕ ಒತ್ತಡಗಳಲ್ಲದೆ, ಡಾ. ರಾಜ್ ವಹಿಸಿದ ಸಾಮಾಜಿಕ ಪಾತ್ರಗಳ ಪ್ರಭಾವವೂ ಅವರು ಸಮುದಾಯದ ನಾಯಕನಾಗಲು ಕಾರಣವಾಗಿರುವುದನ್ನು ತಳ್ಳಿ ಹಾಕುವಂತಿಲ್ಲ. ಮತ್ತೆ ಡಾ. ಕೆ.ವಿ. ನಾರಾಯಣ ಅವರ ಮಾತಿನಲ್ಲಿ ಹೇಳುವುದಾದರೆ. "ಕರ್ನಾಟಕ ಸಮಾಜದಲ್ಲಿ ನಡೆದ ಸಂಚಲನೆಗಳ ಫಲಿತಗಳನ್ನು ರಾಜ್ಕುಮಾರ್
ನಟಿಸುತ್ತಾ ಬಂದಿರುವ ನಾಯಕ ಪಾತ್ರಗಳು ಒಂದಲ್ಲ ಒಂದು ಬಗೆಯಲ್ಲಿ ಪ್ರತಿಬಿಂಬಿಸುತ್ತಾ ಬಂದಿವೆ". ಅವರು ನಟಿಸಿದ ಪಾತ್ರಗಳು ಕರುನಾಡ ಸಮಾಜದ ಕನ್ನಡಿಗನ ವಿವಿಧ ಪ್ರತಿರೂಪಗಳಾಗಿರುವುದು ಕಾಕತಾಳೀಯವಾಗಿರಬಹುದು. ಆದರೆ ಸಮುದಾಯ ಅರ್ಥೈಸಿಕೊಂಡ ಜನಪ್ರಿಯ ಬಿಂಬವೊಂದನ್ನು ರಾಜ್ ಅಭಿವ್ಯಕ್ತಿಸಿದ್ದು ಅವರನ್ನು ನಾಯಕರನ್ನಾಗಿ ಸ್ಪಷ್ಟವಾಗಿದೆ. ಅವರು ಪಾತ್ರಗಳಲ್ಲಿ ತೋರುವ ಅಥವಾ ಬಿಂಬಿಸುವ ವಿಶಿಷ್ಟ ಮಾದರಿಗಳನ್ನು ನೋಡಿ! ತಾಯಿಯನ್ನು ಆರಾಧಿಸುವ ವಾತ್ಸಲ್ಯಮಯಿ ಮಗ, ಸ್ತ್ರೀ ಸಮುದಾಯ ಇಷ್ಟಪಡುವ ಪ್ರೀತಿಯ ಗಂಡ, ಜನಸಮುದಾಯ ಮೆಚ್ಚುವ ಸಾಹಸ, ತ್ಯಾಗ, ನಿಷ್ಠೆಯ ನಾಯಕ, 'ದೇವರು ಕೊಟ್ಟ ತಂಗಿ'ಯ ಒಲವಿನ ಅಣ್ಣ, 'ಸಂಪತ್ತಿಗೆ ಸವಾಲ್'ನಂಥ ತುಂಟತನ ಮತ್ತು ನಿಷ್ಠೆಯ ಮೈದುನ, ಜೊತೆಗೆ ಕಾಲ-ದೇಶ ಬದ್ಧವಲ್ಲದ ಸಾರ್ವತ್ರಿಕ ಮೌಲ್ಯಗಳ ಪ್ರತಿರೂಪಗಳಲ್ಲಿ ಅವರು ಹತ್ತು ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದು, ಅವರು ಕನ್ನಡ ಭಾವಕೋಶದಲ್ಲಿ ಪ್ರವೇಶಿಸುವುದಕ್ಕೆ ಸಾಧ್ಯವಾಯಿತು. ಆ ಪಾತ್ರಗಳ ಪ್ರಭಾವ ಎಷ್ಟರ ಮಟ್ಟಿಗಿದೆಯೆಂದರೆ 'ಬಂಗಾರದ ಮನುಷ್ಯ' ನೋಡಿದ ಅನೇಕ ನತದೃಷ್ಟ ಸೋದರಿಯರು ತಮ್ಮ ಸೋದರರಲ್ಲಿ ರಾಜೀವನನ್ನು ಕಾಣಲು ಯತ್ನಿಸಿದ್ದಾರೆ. 'ನಮ್ಮ ಸಂಸಾರ', 'ಚಂದವಳ್ಳಿಯ ತೋಟ' ನೋಡಿದ ಹಲವಾರು ಜನರು ಕುಟುಂಬದ ವಿಘಟನೆಯನ್ನು ತಡೆದಿದ್ದಾರೆ. 'ಕರುಳಿನ ಕರೆ' ಚಿತ್ರ ನೋಡಿ ತಾನೂ ಕಾರ್ಮಿಕ ನಾಯಕನಾಗಬೇಕೆಂದು ಹಂಬಲಿಸಿ ಸೋತ ವ್ಯಕ್ತಿಗಳಿದ್ದಾರೆ. 'ಜೀವನ ಚೈತ್ರ' ಚಿತ್ರ ಹಲವಾರು ಹೆಂಡದಂಗಡಿಗಳಿಗೆ ಬೀಗಮುದ್ರೆ ಹಾಕಿಸಿದೆ. 'ಭಕ್ತ ಕುಂಬಾರ' ನೋಡಿ ಬಂದ ಅನೇಕರು ಫಂಡರಾಪುರಕ್ಕೆ ಹೋಗಿ ಬಂದಿದ್ದಾರೆ. ರಾಜ್ರವರು 'ಮಂತ್ರಾಲಯ ಮಹಾತ್ಮ'ಯಲ್ಲಿ ಅಭಿನಯಿಸಿದ ನಂತರ ಹಾಗೂ ಅವರಿಗೆ ರಾಘವೇಂದ್ರಸ್ವಾಮಿ ಬಗ್ಗೆ ಇರುವ ಅಚಲ ಭಕ್ತಿ ಪ್ರಕಟವಾದ ನಂತರ ಅನೇಕ ಶೂದ್ರರು ಮಂತ್ರಾಲಯದ ಭಕ್ತರಾಗಿದ್ದಾರೆ. ಗುರುವಾರ ಮಾಂಸದೂಟವನ್ನು ವರ್ಜ ಮಾಡಿದ್ದಾರೆ.
ಇವೆಲ್ಲ ವ್ಯಕ್ತ ರೂಪಗಳು. ಅವ್ಯಕ್ತ ಭಾವಕೋಶದಲ್ಲಿ ರಾಜ್ರವರನ್ನು ಮುಂದಿಟ್ಟುಕೊಂಡು ಸಂತನಾಗಲು, ದುಷ್ಟ ಶಿಕ್ಷೆಗೆ ಶಿಷ್ಟ ರಕ್ಷಣೆಗೆ ಮುಂದಾಗಲು ಬಯಸಿದ್ದ ಕೋಟಿ ಕೋಟಿ ಹೃದಯಗಳಿದ್ದವು. ಈ ಹಿನ್ನೆಲೆಗಳೆಲ್ಲವನ್ನೂ ಕಂಡಾಗ ಸಮುದಾಯದ ನಾಯಕರಾದರು కుమారా వికి ಅರ್ಥವಾಗುತ್ತದೆ. ಎಂಬುದು
ರಾಜ್ರವರು ಸಮುದಾಯದ ಚಾರಿತ್ರಿಕ ಒತ್ತಡಗಳಿಂದ, ಅಭೀಷ್ಠೆಯಿಂದ ನಾಯಕರಾದರು. ಕನ್ನಡ ಚಿತ್ರರಂಗಕ್ಕೆ ಒಳಬಲವಾದರು ಎಂದ ಮಾತ್ರಕ್ಕೆ ಅವರು ಅಪ್ರತಿಮ ಕಲಾವಿದರಲ್ಲ ಎಂದು ಅರ್ಥವಲ್ಲ. ಅವರೊಬ್ಬ ಅಭಿಜಾತ ಕಲಾವಿದರಷ್ಟೇ ಅಲ್ಲ, ಅಧ್ಯಯನಯೋಗ್ಯ ಕಲಾವಿದರು ಸಹ.
ಆರಂಭದಲ್ಲಿ ಭಕ್ತಿ, ಪೌರಾಣಿಕ ಪಾತ್ರಗಳಲ್ಲಿ ತಲ್ಲೀನರಾಗಿ ಅಭಿನಯಿಸುತ್ತಿದ್ದ ರಾಜ್ ಕ್ರಮೇಣ ಆ ಎರಕದಿಂದ ಹೊರಬಂದರು. ಎಲ್ಲ ಬಗೆಯ ವಸ್ತು-ವೈವಿಧ್ಯ ಪಾತ್ರಗಳಲ್ಲಿ ಅಭಿನಯಿಸಿದರು. ಕಾಲಾನಂತರದಲ್ಲಿ ಆದರೆ ಬಹುಬೇಗ ಅವರು ಅಭಿನಯದಲ್ಲಿ ಶೈಲಿಯೊಂದನ್ನು ರೂಢಿಸಿಕೊಂಡದ್ದು ಚಲನಚಿತ್ರಗಳ ಯಾವುದೇ ಗಂಭೀರ ವಿದ್ಯಾರ್ಥಿಗೆ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಅದು ಅವರದೇ ಆದ ಒರಿಜಿನಲ್ ಶೈಲಿ. ಏಕೆಂದರೆ ಅವರು ಜನಪ್ರಿಯತೆಯ ಮೆಟ್ಟಿಲನ್ನು ಏರುವಾಗ ಅಭಿನಯಕ್ಕೆ ಆದರ್ಶವೆಂಬಂತೆ ಶಿವಾಜಿ ಗಣೇಶನ್ರವರನ್ನು ಬಿಂಬಿಸಲಾಗುತ್ತಿತ್ತು. ಪೌರಾಣಿಕ ಪಾತ್ರಗಳಲ್ಲಿ ಎನ್ಟಿಆರ್ರವರನ್ನು ಮೀರಿಸುವ ಕಲಾವಿದರಿಲ್ಲ ಎಂಬ ಭಾವನೆ ಗಟ್ಟಿಯಾಗಿತ್ತು. ದಕ್ಷಿಣ ಭಾರತದ ಎಲ್ಲ ನಟರ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಶಿವಾಜಿಯವರ ಪ್ರಭಾವವಿರುವುದನ್ನು ಕಾಣಬಹುದು. ಪುಟಗಟ್ಟಲೇ ಸಂಭಾಷಣೆ, ಮುಖಸ್ನಾಯುಗಳ ವಿಲಕ್ಷಣ ಚಲನೆ, ಧ್ವನಿಯ ಅಪಾರ ಏರಿಳಿತ, ಅತಿರೇಕವೆನ್ನಬಹುದಾದ ಭಾವಾಭಿವ್ಯಕ್ತಿ ಇತ್ಯಾದಿ ಲಕ್ಷಣಗಳು ಶಿವಾಜಿಯವರ ಅಭಿನಯದ ವಿಶಿಷ್ಟತೆ. ಇತರ ಭಾಷೆಯ ನಟರೂ ಅವರ ಅನುಕರಣೆಯಲ್ಲಿ ಸ್ಪರ್ಧೆ ಹೂಡಿದ್ದರು. ಆ ಸಮಯದಲ್ಲಿ ರಾಜ್ ಅಂಥ ಶೈಲಿಯಿಂದ ವಿಮುಖರಾದರು. ಪಾತ್ರಗಳನ್ನು underplay ಮಾಡುವ ಸಿನಿಮಾ ವ್ಯಾಕರಣ ಅಪ್ರಜ್ಞಾಪೂರ್ವಕವಾಗಿ ಅವರಿಗೆ ಸಿದ್ಧಿಸಿತ್ತು. ಹಾಗಾಗಿ ಕನ್ನಡದ ಪರಿಸರಕ್ಕೆ ಸೂಕ್ತವಾದ, ಕನ್ನಡಿಗರಿಗೇ ಸಹಜವಾದ ಒಂದು ವಿಶಿಷ್ಟವಾದ ಅಭಿನಯ ಶೈಲಿಯನ್ನು ಅವರು ರೂಢಿಗೆ ತಂದರು. ಶಿವಾಜಿಗಣೇಶನ್ ಅವರ ಅಭಿನಯದ 'ಪಾಸಮಲರ್' ಚಿತ್ರವನ್ನು ಕನ್ನಡಕ್ಕೆ 'ವಾತ್ಸಲ್ಯ' ಹೆಸರಿನಲ್ಲಿ ರೀಮೇಕ್ ಮಾಡಲಾಯಿತು. ಒರಿಜಿನಲ್ ಶಿವಾಜಿಯವರ ಅಭಿನಯವನ್ನು ರಾಜ್ರವರೊಡನೆ ಹೋಲಿಸಿ ನೋಡಿದಾಗ ಈ ಚಿತ್ರದ ಶೈಲಿ ಅರ್ಥವಾಗುತ್ತದೆ. ಜೊತೆಗೆ ಡಾ. ಕೆ.ವಿ. ನಾರಾಯಣ ಅವರು ಅಭಿಪ್ರಾಯ ಪಡುವಂತೆ "ಕನ್ನಡದ ಪ್ರಮಾಣೀಕೃತ ಉಚ್ಚಾರಣೆಗೆ ಒಂದು ಮಾದರಿ ಎಂಬಂತೆ ಅವರ ವಾಚಿಕಾಭಿನಯ ಬೆಳೆದು ಬಂದಿದೆ", ಜೊತೆಗೆ ರಾಜ್ರವರು ವಹಿಸುತ್ತಿದ್ದ
ಅವರು ತೊಡುವ ಹಿಡಿವ ವಸ್ತ್ರ, ಪಾತ್ರಗಳಲ್ಲಿ ನಿರ್ಜೀವ ವಸ್ತುಗಳಿಗೆ, ಪರಿಸರಕ್ಕೆ ಒಂದು ಜೀವಂತಿಕೆ ಮೈದುಂಬುತ್ತಿತ್ತು. ವಸ್ತುಗಳು ಪಾತ್ರದ ಅವಿಭಾಜ್ಯ ಅಂಗಗಳಾಗಿರುತ್ತಿದ್ದವು. ಅವರು ಸನಾದಿಯನ್ನು ನುಡಿಸಲಿ, ವೀಣೆ, ಕೊಳಲು ಯಾವುದನ್ನೇ ನುಡಿಸಲಿ, ಸಹಜವಾಗಿ ಅವರೇ ನುಡಿಸುತ್ತಿರಬಹುದೆನ್ನುವ ರೀತಿಯಲ್ಲಿ ಅಭಿನಯ ಗರಿಗಟ್ಟಿಕೊಳ್ಳುತ್ತಿತ್ತು. ನೇಗಿಲು ಹಿಡಿಯಲಿ, ಚಪ್ಪಲಿ ಹೊಲಿಯಲಿ. ಆ ಕಸುಬಿನಲ್ಲಿ ನಿಷ್ಣಾತರೆನಿಸುವಷ್ಟು ಸಹಜತೆ ಕಾಣುತ್ತಿತ್ತು. ನಡುವಿಗೆ ಟವೆಲ್ ಕಟ್ಟಲಿ, ಬಾರುಕೋಲು ಹಿಡಿಯಲಿ ಪಾತ್ರದೊಡನೆ ಅವು ಲೀನವಾಗುತ್ತಿದ್ದ ಪರಿ ನೋಡಿಯೇ ಆನಂದಿಸಬೇಕು.
ಆದರೂ ಒಬ್ಬ ನಟ ಅಷ್ಟೊಂದು ದೀರ್ಘಕಾಲ ತನ್ನ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಸೂಕ್ತ ಸನ್ನಿವೇಶಗಳನ್ನು ನ್ನು ಒದಗಿಸಿಕೊಟ್ಟ ಚಾರಿತ್ರಿಕ ರಿತ್ರಿಕ ಒತ್ತಡಗಳನ್ನು ಕಡೆಗಣಿಸುವಂತಿಲ್ಲ. ತಮ್ಮ ವೃತ್ತಿಬದುಕಿನ ಪೂರ್ವಾರ್ಧದಲ್ಲೇ ಎಲ್ಲ ಬಗೆಯ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದ ರಾಜ್ರವರ ಚಿತ್ರಗಳು ಉತ್ತರಾರ್ಧದಲ್ಲಿ ಯಶಸ್ಸು ಕಾಣಲು ಅವರ ಹಿಂದಿನ ಯಶಸ್ಸೆಂದೇ ಆಧಾರವಲ್ಲ. ರಾಜ್ರವರ ಅಭಿನಯದ ಉತ್ತರಾರ್ಧದ ಕಾಲಘಟ್ಟ ಸಮಾಜದ ಸ್ಥಿತ್ಯಂತರ ಕಾಲವೂ ಹೌದು. ಹಳ್ಳಿಯಿಂದ ನಗರಕ್ಕೆ ಬಂದು ನೆಲೆಯಾದ ಕುಟುಂಬಗಳು ಆತಂತ್ರ ಬದುಕನ್ನು ಎದುರಿಸುತ್ತಿದ್ದ ಕಾಲ. ನಗರೀಕರಣ ಹಾಗೂ ಇತರ ಒತ್ತಡಗಳಿಂದ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕು ಮತ್ತು ಮತ್ತೆ ಮೂಲವನ್ನು ಹುಡುಕುವ ಹಪಾಹಪಿ ಆರಂಭವಾದ ಕಾಲ. ಹಳ್ಳಿಯ ಸಮಸ್ಯೆಗಳು ದೊಡ್ಡದಾಗಿ ಚರ್ಚಿತವಾಗುತ್ತಿದ್ದ ಕಾಲ. ಅಂಥ ಸಮಯದಲ್ಲಿ ಚಿತ್ರರಂಗದಲ್ಲಿ ಉತ್ಪಾದನೆಯಾಗುತ್ತಿದ್ದ ಚಿತ್ರಗಳು ಭ್ರಮಾಲೋಕವನ್ನು ಸೃಷ್ಟಿಸುತ್ತಿರುವಾಗ, ರಾಜ್ರವರು ಮತ್ತೆ ಕೌಟುಂಬಿಕ ಹಾಗೂ ಪೌರಾಣಿಕ, ಜಾನಪದ (ಭಕ್ತಪ್ರಹ್ಲಾದ, ಕವಿರತ್ನ ಕಾಳಿದಾಸ, ಯಾರಿವನು, ಜೀವನ ಚೈತ್ರ, ಆಕಸ್ಮಿಕ) ಚಿತ್ರಗಳಲ್ಲಿ ಅಭಿನಯಿಸಿದರು. ಹಾಗಾಗಿ ಪ್ರೇಕ್ಷಕ ವರ್ಗ ಮತ್ತೆ ರಾಜ್ ಚಿತ್ರಗಳು ಸಮಕಾಲೀನ ಸಂದರ್ಭದಲ್ಲಿ ಪಡೆದುಕೊಂಡ ಸಾಂಗತ್ಯವನ್ನು ಗುರುತಿಸಿತು.
ಇಂಥ ಅಪ್ರತಿಮ ಕಲಾವಿದ ಮತ್ತು ಸಾಂಸ್ಕೃತಿಕ ನಾಯಕ ಸಹ ಸಮುದಾಯ ಹೇರಿದ ಮಿತಿಯಲ್ಲಿ ಬಂಧಿಯಾಗಬೇಕಾಯಿತು. ಇದು ಜನಪ್ರಿಯತೆ ತರುವ ನಶೆಯನ್ನು ಮೀರಲಾಗದ ದೌರ್ಬಲ್ಯವು ಹೇರುವ ಮಿತಿ. ಆರಂಭದಲ್ಲಿ ಪಾತ್ರಗಳ ವ್ಯಾಪ್ತಿಯಲ್ಲೇ ರಾಜ್ರವರ ಅಭಿನಯ ಅರಳುತ್ತಿತ್ತು. ಹಾಗಾಗಿ ಅವರ ಎಲ್ಲ ಬಗೆಯ ಪಾತ್ರಗಳಲ್ಲೂ ಅವರ ಅಭಿನಯದ ಪಲಕುಗಳನ್ನು ಕಾಣಬಹುದಿತ್ತು. ಆದರೆ ಕ್ರಮೇಣ ಅವರ ಜನಪ್ರಿಯತೆಯೇ ಪಾತ್ರವನ್ನು ನಿರ್ಧರಿಸುವಂತಾಯಿತು. ಇದು ಎಷ್ಟರಮಟ್ಟಿಗೆ ಹೋಯಿತೆಂದರೆ 'ದಾರಿ ತಪ್ಪಿದ ಮಗ' ಚಿತ್ರದಲ್ಲಿನ ದುಷ್ಟ ಸೋದರನ ಪಾತ್ರವು 'ಹೆಣ್ಣನ್ನು ಅನುಭವಿಸಿದ ನಂತರ ಬಟ್ಟೆಯ ಮೇಲಿನ ಧೂಳನ್ನು ಕೊಡವುವಂತೆ ಕೊಡವಬೇಕು' ಎಂದು ಹೇಳುವ ಸಂಭಾಷಣೆಗೆ ಒಂದು ವರ್ಗದಿಂದ
ವಿರೋಧ ವ್ಯಕ್ತವಾಯಿತು. ಅಂದಿನಿಂದ ರಾಜ್ರವರ ಪಾತ್ರಗಳು ಒಂದು ಬಗೆಯಲ್ಲಿ ಅವರಿಗೆ ಸೃಷ್ಟಿಯಾದ ಇಮೇಜಿಗೇ ಅಧೀನವಾಗತೊಡಗಿದವು. ಎಷ್ಟರಮಟ್ಟಿಗೆಂದರೆ 'ಮಯೂರ' ಚಿತ್ರ ಒಂದು ಇತಿಹಾಸದ ಚಿತ್ರವಾಗದೇ ರಾಜ್ರವರ ಇಮೇಜಿಗೆ ಎರಕ ಹೊಯ್ದ ಚಿತ್ರವಾಯಿತು. ಇದು ರೂಪುಗೊಂಡಿದ್ದು ರಾಜ್ ತಮ್ಮ ವೃತ್ತಿ ಬದುಕನ್ನು ಸವೆಸಿದ ಬಹಳ ಕಾಲದ ನಂತರ. ಇಲ್ಲದಿದ್ದಲ್ಲಿ ಗೆಳೆಯನ ಹೆಂಡತಿಯನ್ನೆ ಮೋಹಿಸುವ ಕೃಷ್ಣಗೌಡನ ಪಾತ್ರದಲ್ಲಾಗಲೀ (ಉಯ್ಯಾಲೆ), ತಮ್ಮನಿಂದ ನೋಯಲ್ಪಡುವ ರಘು (ನನ್ನ ತಮ್ಮ), ಸರ್ವಸ್ವವನ್ನೂ ತ್ಯಾಗಮಾಡಿ ಸಾವನಪ್ಪುವ ರವಿ (ಕಸ್ತೂರಿ ನಿವಾಸ) ಯನ್ನಾಗಲೀ, ಪ್ರೇಮಿಸಿದ ಮಂಗಳೆಯು ಬೇರೊಬ್ಬನ ಪತ್ನಿಯಾದಾಗ ವ್ಯಗ್ರಗೊಂಡು ಕಟ್ಟಿಕೊಂಡ ಹೆಂಡತಿಗೆ ಬಡಿಯುವ ಅಸಹಾಯಕ ನಟರಾಜ (ಸರ್ವಮಂಗಳಾ) ನನ್ನಾಗಲೀ ನೋಡುವ ಸೌಭಾಗ್ಯ ಸಿಗುತ್ತಿರಲಿಲ್ಲವೇನೋ?! ಇದನ್ನೆಲ್ಲ ಗಮನಿಸಿದಾಗ ರಾಜ್ರವರಿಗೆ ಜಪಾನಿ ನಟ ತೊಷಿರೋ ಮಿಕ್ಯೂನೆಗೆ ಸಿಕ್ಕಿದಂಥ ಆಕಿರ ಕುರಸೊವ ಅಥವಾ ಬಂಗಾಳಿ ನಟ ಸೌಮಿತ್ರ ಚಟರ್ಜಿಗೆ ದಕ್ಕಿದಂಥ ಸತ್ಯಜಿತ್ ರಾಯ್ ಅಂಥ ನಿರ್ದೇಶಕರು ಸಿಕ್ಕಿದರೆ ಎಷ್ಟು ಚೆಂದಿರುತ್ತಿತ್ತು ಎನಿಸದಿರದು. ಆದರೆ ಜನಸಮುದಾಯವು ನಟನೊಬ್ಬನ ಪ್ರತಿಭೆಗೆ ಲಕ್ಷ್ಮಣರೇಖೆ ಎಳೆಯುವ ಮುನ್ನವೇ ರಾಜ್ ಎಲ್ಲ ಬಗೆಯ ಪಾತ್ರಗಳಲ್ಲೂ ಮಿಂಚಿ ತಮ್ಮ ನಟನೆಯ ವಿಶ್ವರೂಪ ದರ್ಶನ ಮಾಡಿಸಿಬಿಟ್ಟಿದ್ದರು ಎಂಬುದೇ ಸಮಾಧಾನದ ಸಂಗತಿ.
ತೆರೆಯಿಂದಾಚೆಗೆ ರಾಜ್ರವರು ತಮ್ಮ ನಿಜಬದುಕಿನಲ್ಲಿ ರೂಢಿಸಿಕೊಂಡ ಸರಳತೆ, ಸಜ್ಜನಿಕೆ ಮತ್ತು ಸಾಮಾಜಿಕ ಮೌಲ್ಯಗಳು ಸಹ ಅವರ ಜನಪ್ರಿಯತೆಗೆ ಪೂರಕವಾದವು. ಬಣ್ಣ ಹಚ್ಚಿದ ಕೂಡಲೇ ಪಾತ್ರದಲ್ಲಿ ತಲ್ಲೀನರಾಗುತ್ತಿದ್ದ ರಾಜ್ ಬಣ್ಣ ಕಳಚಿದ ಕೂಡಲೇ ಸರಳ ಮನುಷ್ಯರಾಗಿ ಬಿಡುತ್ತಿದ್ದರು. ಅವರ ಸಜ್ಜನಿಕೆ, ವಿನಯವಂತೂ ನಂಬಲಸಾಧ್ಯವೆನಿಸುವ ಮಟ್ಟದಲ್ಲಿತ್ತು. ಹಾಗಾಗಿ ರಾಜ್ ಅವರ ತೆರೆಯ ಮೇಲಿನ ಅಭಿನಯ ಮನುಷ್ಯ ಸಹಜವಾಗಿ ಕಂಡರೆ ನಿಜಜೀವನದ ಮುತ್ತುರಾಜ್ ವರ್ತನೆ 'ಕೃತಕ' ವೆಂಬಂತೆ ಕಾಣುತ್ತಿತ್ತು.
ಹಾಗೆ ನೋಡಿದರೆ ರಾಜ್ ಅವರ ಬದುಕು ಅದ್ಭುತ ವೈಪರೀತ್ಯಗಳ ಸರಮಾಲೆ. ಅಪಾರ ಜನಪ್ರಿಯತೆ ಪಡೆದರೂ ಅಂತರಂಗದಲ್ಲಿ ಸಂಕೋಚದಿಂದ ಮುದ್ದೆಯಾದವರು. ಜನಪ್ರೀತಿಯ ಹಿಂದಿನ ಗುಟ್ಟು ಅವರಿಗೂ ಅರ್ಥವಾದಂತಿರಲಿಲ್ಲ. ಅದು ರಾಜ್ ಕುಮಾರ್ಗೆ, ಆ ಮೂಲಕ ಜನರಿಗೆ ಸಂದದ್ದು ಎಂದು ನಿರ್ಲಿಪ್ತವಾಗಿ ಹಿಂದಿರುಗಿಸಿ ಮುತ್ತುರಾಜ್ ಆಗಿಯೇ ಉಳಿದರು. ಪ್ರಾಥಮಿಕ ಶಾಲಾಶಿಕ್ಷಣವನ್ನು ಮುಗಿಸದ ಅವರು ಮುಂದೆ ಪ್ರತಿಷ್ಠಿತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ನಾಡೋಜ ಪದವಿ ಪಡೆದರು. ವ್ಯಾಕರಣಶುದ್ಧವಾಗಿ ಒಂದು ಸಾಲನ್ನೂ ಬರೆಯಲಾಗದೆ ಏಟು ತಿಂದ ಬಾಲಕ ಮುಂದೆ ಪಂಡಿತ-ಪಾಮರರನ್ನು ಮೆಚ್ಚಿಸುವ
ನಟನಾಗಿ ಬೆಳೆದರು. ರಾಜ್ ಅವರ ಮಾತಿನಲ್ಲಿ ಹೇಳುವುದಾದರೆ ಅವರು ನಟನಾವೃತ್ತಿ ಕೈಗೊಂಡಿದ್ದು ಹೊಟ್ಟೆಪಾಡಿಗಾಗಿ. ಆದರೆ ಅವರೇ ಉದ್ಯಮವಾಗಿ ಬೆಳೆದರು. ರಾಜ್ಯದ ಮೂಲೆಯೊಂದರ ಹಳ್ಳಿಯಲ್ಲಿ ಬೆಳೆದ ವಿದ್ಯಾವಂಚಿತ ಬಡಹುಡುಗನೊಬ್ಬ ಸೀಮಿತ ಮಾರುಕಟ್ಟೆಯ ಕನ್ನಡ ಚಿತ್ರರಂಗದ ಭೌಗೋಳಿಕ ಮತ್ತು ಆರ್ಥಿಕ ಮಿತಿಯನ್ನು ಮೀರಿ ಇತಿಹಾಸ ಪುರುಷನಾಗಿ ಬೆಳೆದ ಕತೆ ಕನ್ನಡಿಗರ ಪಾಲಿಗೆ ನಿರಂತರ ರೋಮಾಂಚನ ತರುವಂಥದ್ದು,
"ಹಲಬಗೆಯ ರಾಜ್ ಸಂಸ್ಕೃತಿಯ ಅಂತರಂಗದ ಕದ ತೆರೆದು ಹಾಡಿದ ರಸಿಕ. ನಮ್ಮೆಲ್ಲರ ಬದುಕನ್ನು ಚೇತೋಹಾರಿಯಾಗಿಟ್ಟವರು. ದೇವನೂರ ಮಹಾದೇವ ಅವರು ಹೇಳಿದಂತೆ ವೇಷಗಳನ್ನು ಹಾಕು
೧.ಯಡ್ರಾಮನ ಸಿನಿಮಾ ಕೈಯಾಲಿ ಹೇಗಿತ್ತು?
ಉತ್ತರ::ಯಡ್ರಾಮನಿಗೆ ಸಿನಿಮಾ ನೋಡುವುದು ಬಹಳ ದೊಡ್ಡ ಗೀಳಾಗಿತ್ತು. ವಿಶೇಷವಾಗಿ ಡಾ. ರಾಜ್ಕುಮಾರ್ ಅವರ ಸಿನಿಮಾಗಳೆಂದರೆ ಅವನಿಗೆ ಅಪಾರ ಆಸಕ್ತಿ. ಕನಕಪುರದಲ್ಲಿ ರಾಜ್ಕುಮಾರ್ರ ಸಿನಿಮಾ ಬಂದಿದೆ ಎಂದು ತಿಳಿದ ತಕ್ಷಣ ಅದನ್ನು ನೋಡಲೇಬೇಕೆಂಬ ಹಂಬಲ ಅವನಲ್ಲಿ ಉಂಟಾಗುತ್ತಿತ್ತು. ಸಿನಿಮಾ ನೋಡಲು ಹಣವಿಲ್ಲದಿದ್ದರೆ ತನ್ನ ಸೋದರಮಾವನ ತೋಟದ ತೆಂಗಿನಕಾಯಿಗಳನ್ನು ಕದ್ದು, ಅವುಗಳನ್ನು ಕಳ್ಳಮಾಲು ಕೊಳ್ಳುವವರಿಗೆ ಮಾರಿ ಬಂದ ಹಣದಿಂದ ಬೋಂಡಾ ತಿಂದು, ರಾಜ್ಕುಮಾರ್ ಸಿನಿಮಾ ನೋಡುತ್ತಿದ್ದನು. ಈ ಕಾರಣದಿಂದ ಅವನ ಸಿನಿಮಾ ಗೀಳು **ಅತಿಯಾದ ಮತ್ತು ಬಿಡಲಾಗದ ಚಟದಂತಿತ್ತು**.
೨.ಚಿಕ್ಕವೀರಮ್ಮ ನನ್ನು ಪರಿಚಯಿಸಿ
ಉತ್ತರ: ಚಿಕ್ಕೀರಮ್ಮ ಎಪ್ಪತ್ತರ ದಶಕದಲ್ಲಿ ಹಳ್ಳಿಯಲ್ಲಿ ವಾಸಿಸುತ್ತಿದ್ದ ವಯಸ್ಸಾದ ಮಹಿಳೆ. ಆಕೆಗೆ ಇಬ್ಬರು ಸೊಸೆಯಂದಿರಿದ್ದರು. ಗುರುವಾರ ಸಂತೆಗೆ ಹೋಗುತ್ತಿದ್ದ ಚಿಕ್ಕೀರಮ್ಮ, ಪಟ್ಟಣದ ಟೆಂಟಿನಲ್ಲಿ ಡಾ. ರಾಜ್ಕುಮಾರ್ ಅವರ ಸಿನಿಮಾ ಪ್ರದರ್ಶನವಾಗುತ್ತಿದೆ ಎಂದು ತಿಳಿದರೆ ಸಿನಿಮಾ ನೋಡಲು ಹೋಗುತ್ತಿದ್ದಳು. ಸೊಸೆಯಂದಿರಿಗೂ ರಾಜ್ಕುಮಾರ್ ಅವರ ಸಿನಿಮಾಗಳ ಬಗ್ಗೆ ಅಪಾರ ಆಸಕ್ತಿ ಇತ್ತು. ಅವರು ಗಂಡಂದಿರನ್ನು ಒತ್ತಾಯಿಸಿ ಎರಡನೇ ಪ್ರದರ್ಶನಕ್ಕೆ ಸಿನಿಮಾ ನೋಡಲು ಹೋಗುತ್ತಿದ್ದರು.
ಸೊಸೆಯಂದಿರು ಬೆಳಗ್ಗೆ ತಡವಾಗಿ ಎದ್ದಾಗ ಚಿಕ್ಕೀರಮ್ಮ ಅವರನ್ನು ಸಿನಿಮಾ ಹುಚ್ಚರೆಂದು ಗದರಿಸುತ್ತಿದ್ದಳು. ಆದರೆ ಆಕೆಯ ಮಾತುಗಳಲ್ಲಿಯೂ ರಾಜ್ಕುಮಾರ್ ಅವರ ಮೇಲಿನ **ಅಭಿಮಾನ ಮತ್ತು ಆಕರ್ಷಣೆ** ಅಡಗಿರುವುದು ಕಂಡುಬರುತ್ತದೆ. ಒಟ್ಟಿನಲ್ಲಿ, ಚಿಕ್ಕೀರಮ್ಮ ರಾಜ್ಕುಮಾರ್ ಅವರ ಜನಪ್ರಿಯತೆ ಹಳ್ಳಿಯ ಸಾಮಾನ್ಯ ಜನರ ಬದುಕಿನ ಮೇಲೂ ಎಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು ಎಂಬುದನ್ನು ತೋರಿಸುವ ಪಾತ್ರವಾಗಿದ್ದಾಳೆ.
೩. ಹಳ್ಳಿ ಮುಗ್ಧರನ್ನು ರಾಜ್ಕುಮಾರ್ ಆಕರ್ಷಿಸಿದ್ದು ಹೇಗೆ?
ಉತ್ತರ : ಹಳ್ಳಿಯ ಮುಗ್ಧ ಜನರನ್ನು ರಾಜ್ಕುಮಾರ್ ಅವರ ಸದ್ಭಾವನೆ, ಸರಳತೆ ಮತ್ತು ಕನ್ನಡತನ ಬಹುವಾಗಿ ಆಕರ್ಷಿಸಿತ್ತು. ಅವರ ಸಿನಿಮಾಗಳನ್ನು ನೋಡಲು ಜನರು ತಮ್ಮ ಕೆಲಸ-ಕಾರ್ಯಗಳನ್ನೂ ಬದಿಗಿಟ್ಟು ಹೋಗುತ್ತಿದ್ದರು. ಯಡ್ರಾಮನು ರಾಜ್ಕುಮಾರ್ ಸಿನಿಮಾ ನೋಡಲು ತೋಟದ ತೆಂಗಿನಕಾಯಿಗಳನ್ನು ಕದ್ದು ಮಾರುತ್ತಿದ್ದನು. ಚಿಕ್ಕೀರಮ್ಮ ಮತ್ತು ಅವಳ ಸೊಸೆಯಂದಿರು ಸಂತೆಯ ಕೆಲಸಗಳನ್ನೂ ಮರೆತು ರಾಜ್ಕುಮಾರ್ ಅವರ ಸಿನಿಮಾ ನೋಡಲು ಹೋಗುತ್ತಿದ್ದರು. ತರೀಕೆರೆಯ ರಾಮಾ ನಾಯಕ್ನು ಹದಿನಾಲ್ಕು ಕಿಲೋಮೀಟರ್ ನಡೆದು ಸ್ನೇಹಿತರೊಂದಿಗೆ ಸಿನಿಮಾ ನೋಡುತ್ತಿದ್ದನು.
ಹೀಗೆ **ಜಾತಿ, ಮತ, ಲಿಂಗ, ವಯಸ್ಸು ಮತ್ತು ಸಾಮಾಜಿಕ ಸ್ಥಾನಮಾನಗಳ ಭೇದವಿಲ್ಲದೆ**, ಹಳ್ಳಿಯ ಜನರು ರಾಜ್ಕುಮಾರ್ ಅವರನ್ನು ತಮ್ಮವರೇ ಎಂಬಂತೆ ಭಾವಿಸಿ ಅಪಾರ ಪ್ರೀತಿ ಮತ್ತು ಅಭಿಮಾನ ತೋರಿಸುತ್ತಿದ್ದರು. ಅವರ ಪಾತ್ರಗಳು ಜನರ ಬದುಕು, ಭಾವನೆ ಮತ್ತು ಆಶೋತ್ತರಗಳಿಗೆ ಹತ್ತಿರವಾಗಿದ್ದುದರಿಂದ ಅವರು ಹಳ್ಳಿ ಮುಗ್ಧರ ಮನಸ್ಸಿನಲ್ಲಿ ಆಳವಾಗಿ ನೆಲೆಸಿದ್ದರು.
೪. ಗೋಕಾಕ್ ಚಳುವಳಿಯಲ್ಲಿ ರಾಜ್ಕುಮಾರ್ ಅವರ ಪ್ರಭಾವ ಹೇಗಿತ್ತು?
ಗೋಕಾಕ್ ಚಳುವಳಿಯಲ್ಲಿ ರಾಜ್ಕುಮಾರ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿತ್ತು. ಶಿಕ್ಷಣದಲ್ಲಿ ಪ್ರೌಢಶಾಲಾ ಹಂತದವರೆಗೆ **ಕನ್ನಡವೇ ಪ್ರಥಮ ಭಾಷೆಯಾಗಿರಬೇಕು** ಎಂಬ ಗೋಕಾಕ್ ಸಮಿತಿಯ ವರದಿಯನ್ನು ಜಾರಿಗೆ ತರಬೇಕೆಂದು ಆರಂಭವಾದ ಚಳುವಳಿ ಕರ್ನಾಟಕದಾದ್ಯಂತ ವಿಸ್ತರಿಸಿತು. ಈ ಸಂದರ್ಭದಲ್ಲಿ ರಾಜ್ಕುಮಾರ್ ಅವರು ಚಳುವಳಿಯ ಹೋರಾಟಕ್ಕೆ ಧುಮುಕಿದ ಪರಿಣಾಮ ಚಳುವಳಿಗೆ ಅಪಾರ ಜನಬೆಂಬಲ ದೊರೆಯಿತು.
ಅಲ್ಲಿಯವರೆಗೆ ರಾಜ್ಕುಮಾರ್ ಅವರ ಜನಪ್ರಿಯತೆ ಮುಖ್ಯವಾಗಿ ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರಲ್ಲಿ ಹೆಚ್ಚು ಇತ್ತು. ಆದರೆ ಗೋಕಾಕ್ ಚಳುವಳಿಯ ಸಂದರ್ಭದಲ್ಲಿ **ಬುದ್ಧಿಜೀವಿಗಳು ಮತ್ತು ಸುಶಿಕ್ಷಿತ ವರ್ಗದವರಿಗೂ ರಾಜ್ಕುಮಾರ್ ಅವರ ವ್ಯಕ್ತಿತ್ವ ಮತ್ತು ಜನಪ್ರಿಯತೆಯ ಪರಿಚಯವಾಯಿತು.** ಅವರ ನಾಯಕತ್ವದಿಂದ ಕನ್ನಡಪರ ಹೋರಾಟಕ್ಕೆ ಹೊಸ ಶಕ್ತಿ ದೊರೆಯಿತು.
ಗೋಕಾಕ್ ಚಳುವಳಿಯ ಮೂಲಕ ರಾಜ್ಕುಮಾರ್ ಅವರು ಕೇವಲ ನಟರಲ್ಲ, **ಕನ್ನಡ ಭಾಷೆ ಮತ್ತು ಕನ್ನಡಿಗರ ಸಾಂಸ್ಕೃತಿಕ ನಾಯಕ** ಎಂಬ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಿಕೊಂಡರು. ಈ ಚಳುವಳಿಯ ನಂತರ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು.
೫. ರಾಜ್ಕುಮಾರ್ ಅವರ ಚಿತ್ರಗಳು ಜನರ ಮೇಲೆ ಪ್ರಭಾವ ಬೀರಿದ ಬಗೆ ಹೇಗೆ? ವಿವರಿಸಿ.
ರಾಜ್ಕುಮಾರ್ ಅವರು ವಿವಿಧ ರೀತಿಯ ಪಾತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡ ಜನರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದರು. ಅವರ ಚಿತ್ರಗಳಲ್ಲಿನ **ತಾಯಿಯ ಮೇಲಿನ ಪ್ರೀತಿ, ಕುಟುಂಬದ ಬಾಂಧವ್ಯ, ತ್ಯಾಗ, ಸಾಹಸ, ನಿಷ್ಠೆ, ಸಹೋದರ ಪ್ರೀತಿ ಮತ್ತು ಸಾಮಾಜಿಕ ಕಾಳಜಿ** ಮುಂತಾದ ಮೌಲ್ಯಗಳು ಜನರನ್ನು ಪ್ರಭಾವಿಸಿದವು.
**‘ಬಂಗಾರದ ಮನುಷ್ಯ’** ಚಿತ್ರವನ್ನು ನೋಡಿದ ಅನೇಕರು ತಮ್ಮ ಸಹೋದರರಲ್ಲಿ ರಾಜೀವನನ್ನು ಕಾಣಲು ಪ್ರಯತ್ನಿಸಿದರು. **‘ನಮ್ಮ ಸಂಸಾರ’ ಮತ್ತು ‘ಚಂದವಳ್ಳಿಯ ತೋಟ’** ಚಿತ್ರಗಳು ಕುಟುಂಬದ ಒಗ್ಗಟ್ಟಿನ ಮಹತ್ವವನ್ನು ತಿಳಿಸಿ, ಕುಟುಂಬದ ವಿಘಟನೆಯನ್ನು ತಡೆಯಲು ಪ್ರೇರಣೆ ನೀಡಿದವು. **‘ಕರುಳಿನ ಕರೆ’** ಚಿತ್ರವು ಕಾರ್ಮಿಕರ ಸಮಸ್ಯೆಗಳ ಬಗ್ಗೆ ಪ್ರಭಾವ ಬೀರಿತು. **‘ಜೀವನ ಚೈತ್ರ’** ಚಿತ್ರವು ಅನೇಕ ಜನರು ಮದ್ಯಪಾನವನ್ನು ತ್ಯಜಿಸುವಂತೆ ಪ್ರೇರೇಪಿಸಿತು.
ಅದೇ ರೀತಿ **‘ಭಕ್ತ ಕುಂಬಾರ’** ಚಿತ್ರವನ್ನು ನೋಡಿದವರು ಪಂಢರಪುರಕ್ಕೆ ತೆರಳಿ ಭಕ್ತಿಯನ್ನು ವ್ಯಕ್ತಪಡಿಸಿದರು. **‘ಮಂತ್ರಾಲಯ ಮಹಾತ್ಮ’** ಚಿತ್ರದಲ್ಲಿ ರಾಜ್ಕುಮಾರ್ ಅವರು ರಾಘವೇಂದ್ರ ಸ್ವಾಮಿಯ ಪಾತ್ರದಲ್ಲಿ ಅಭಿನಯಿಸಿದ ನಂತರ ಅನೇಕರು ಮಂತ್ರಾಲಯದ ಭಕ್ತರಾದರು. ಕೆಲವರು ಗುರುವಾರ ಮಾಂಸಾಹಾರವನ್ನು ತ್ಯಜಿಸಿದರು.
ಹೀಗೆ ರಾಜ್ಕುಮಾರ್ ಅವರ ಚಿತ್ರಗಳು ಕೇವಲ ಮನರಂಜನೆ ನೀಡದೆ **ಜನರ ಆಲೋಚನೆ, ನಡವಳಿಕೆ, ಕುಟುಂಬ ಜೀವನ, ಸಾಮಾಜಿಕ ಮೌಲ್ಯಗಳು ಮತ್ತು ಧಾರ್ಮಿಕ ಭಾವನೆಗಳ ಮೇಲೂ ಪ್ರಭಾವ ಬೀರಿದವು.** ಆದ್ದರಿಂದ ಅವರು ಕನ್ನಡ ಜನಮಾನಸದ ಸಾಂಸ್ಕೃತಿಕ ನಾಯಕನಾಗಿ ಬೆಳೆದರು.
೬. ರಾಜ್ಕುಮಾರ್ ಅವರ ಪೌರಾಣಿಕ ಚಿತ್ರಗಳ ವಿಶೇಷತೆ ಕುರಿತು ಬರೆಯಿರಿ
ರಾಜ್ಕುಮಾರ್ ಅವರು ಪೌರಾಣಿಕ ಮತ್ತು ಭಕ್ತಿಪ್ರಧಾನ ಪಾತ್ರಗಳಲ್ಲಿ ಅತ್ಯಂತ ಸಹಜವಾಗಿ ಅಭಿನಯಿಸಿ ಕನ್ನಡ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದರು. ಅವರ **ಸುಂದರವಾದ ಶರೀರ, ಮುಖಭಾವ, ಗಂಭೀರ ಧ್ವನಿ, ಶುದ್ಧ ಕನ್ನಡ ಉಚ್ಚಾರಣೆ ಮತ್ತು ಸಹಜ ಅಭಿನಯ** ಪೌರಾಣಿಕ ಪಾತ್ರಗಳಿಗೆ ವಿಶೇಷ ಮೆರುಗು ನೀಡಿತು.
ಆರಂಭದಲ್ಲಿ ಅವರು ಭಕ್ತಿ ಮತ್ತು ಪೌರಾಣಿಕ ಪಾತ್ರಗಳಲ್ಲಿ ತಲ್ಲೀನರಾಗಿ ಅಭಿನಯಿಸಿದರು. **‘ಬೇಡರ ಕಣ್ಣಪ್ಪ’, ‘ಭಕ್ತ ಕುಂಬಾರ’, ‘ಮಂತ್ರಾಲಯ ಮಹಾತ್ಮ’** ಮುಂತಾದ ಚಿತ್ರಗಳಲ್ಲಿ ಅವರ ಅಭಿನಯ ಜನರನ್ನು ಆಳವಾಗಿ ಪ್ರಭಾವಿಸಿತು. ಅವರು ಪೌರಾಣಿಕ ಹಾಗೂ ಚಾರಿತ್ರಿಕ ಪಾತ್ರಗಳನ್ನು ನಿರ್ವಹಿಸಿದ ರೀತಿಯಿಂದ ಜನರಿಗೆ ಆ ಪಾತ್ರಗಳೇ ರಾಜ್ಕುಮಾರ್ ಅವರ ರೂಪದಲ್ಲಿ ಕಣ್ಣಿಗೆ ಕಾಣುವಂತಾಯಿತು.
ಕೃಷ್ಣದೇವರಾಯ, ಕನಕದಾಸ, ಸಂಗೊಳ್ಳಿ ರಾಯಣ್ಣ, ಮಂತ್ರಾಲಯದ ರಾಘವೇಂದ್ರ ಸ್ವಾಮಿ, ಕೆಂಪೇಗೌಡ, ಕಂಠೀರವ ಮತ್ತು ಪುರಂದರದಾಸರಂತಹ ಪಾತ್ರಗಳ ಚಿತ್ರಗಳನ್ನು ಕಲಾವಿದರು ಬಿಡಿಸುವಾಗಲೂ ರಾಜ್ಕುಮಾರ್ ಅವರ ರೂಪವನ್ನು ಅಪ್ರಜ್ಞಾಪೂರ್ವಕವಾಗಿ ನೆನಪಿಸಿಕೊಳ್ಳುವಷ್ಟು ಅವರ ಪ್ರಭಾವವಿತ್ತು.
ಹೀಗೆ **ಪೌರಾಣಿಕ ಪಾತ್ರಗಳಿಗೆ ಜೀವ ತುಂಬಿ, ಕನ್ನಡದ ಸಂಸ್ಕೃತಿ, ಭಕ್ತಿ ಮತ್ತು ಪರಂಪರೆಯನ್ನು ಜನರಿಗೆ ತಲುಪಿಸುವಲ್ಲಿ ರಾಜ್ಕುಮಾರ್ ಅವರ ಕೊಡುಗೆ ಅಪಾರವಾಗಿದೆ.**
೭. ಜನಪ್ರಿಯತೆಯ ಜೊತೆಯಲ್ಲಿಯೇ ರಾಜ್ಕುಮಾರ್ ಸರಳವಾಗಿ ಬದುಕಿದರು – ಪಾಠದ ಹಿನ್ನೆಲೆಯಲ್ಲಿ ಚರ್ಚಿಸಿ.
ರಾಜ್ಕುಮಾರ್ ಅವರು ಅಪಾರ ಜನಪ್ರಿಯತೆ ಮತ್ತು ಖ್ಯಾತಿಯನ್ನು ಪಡೆದಿದ್ದರೂ ತಮ್ಮ ನಿಜಜೀವನದಲ್ಲಿ ಅತ್ಯಂತ **ಸರಳತೆ, ಸಜ್ಜನಿಕೆ ಮತ್ತು ವಿನಯವನ್ನು** ರೂಢಿಸಿಕೊಂಡಿದ್ದರು. ಅವರು ತೆರೆಯ ಮೇಲೆ ಬಣ್ಣ ಹಚ್ಚಿಕೊಂಡು ಪಾತ್ರದಲ್ಲಿ ಸಂಪೂರ್ಣವಾಗಿ ತಲ್ಲೀನರಾಗುತ್ತಿದ್ದರು. ಆದರೆ ಬಣ್ಣ ಕಳಚಿದ ಕೂಡಲೇ ಸಾಮಾನ್ಯ ಮನುಷ್ಯರಾದ ಮುತ್ತುರಾಜ್ ಆಗಿ ಬದುಕುತ್ತಿದ್ದರು.
ಅವರಿಗೆ ಅಪಾರ ಜನಪ್ರಿಯತೆ ದೊರೆತರೂ ಅದರ ಬಗ್ಗೆ ಅವರಿಗೆ ಅಹಂಕಾರವಿರಲಿಲ್ಲ. ಜನರು ತಮಗೆ ನೀಡಿದ ಪ್ರೀತಿ ಮತ್ತು ಗೌರವವನ್ನು ತಮ್ಮ ಸಾಧನೆ ಎಂದು ಭಾವಿಸದೆ, ಅದು **ರಾಜ್ಕುಮಾರ್ಗೆ ದೊರೆತದ್ದು, ಮುತ್ತುರಾಜ್ಗೆ ಅಲ್ಲ** ಎಂಬ ನಿರ್ಲಿಪ್ತ ಮನೋಭಾವ ಹೊಂದಿದ್ದರು. ಅವರ ಸೌಜನ್ಯ, ವಿನಯ ಮತ್ತು ಸರಳ ನಡವಳಿಕೆ ಜನರನ್ನು ಮತ್ತಷ್ಟು ಆಕರ್ಷಿಸಿತು.
ಪ್ರಾಥಮಿಕ ಶಾಲಾ ಶಿಕ್ಷಣವನ್ನಷ್ಟೇ ಪಡೆದಿದ್ದ ಅವರು ಮುಂದೆ **ಗೌರವ ಡಾಕ್ಟರೇಟ್ ಮತ್ತು ನಾಡೋಜ ಪದವಿ** ಪಡೆದರೂ ಅವುಗಳಿಂದ ಗರ್ವಪಡಲಿಲ್ಲ. ನಟನೆಯನ್ನು ಅವರು ಆರಂಭದಲ್ಲಿ ಹೊಟ್ಟೆಪಾಡಿನ ವೃತ್ತಿಯಾಗಿ ಸ್ವೀಕರಿಸಿದರೂ, ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅಪ್ರತಿಮ ಸ್ಥಾನ ಗಳಿಸಿದರು.
ಹೀಗಾಗಿ ಅಪಾರ ಯಶಸ್ಸು, ಜನಪ್ರಿಯತೆ, ಪ್ರಶಸ್ತಿ-ಗೌರವಗಳು ದೊರೆತರೂ ರಾಜ್ಕುಮಾರ್ ಅವರು **ಸರಳತೆ, ಸಜ್ಜನಿಕೆ, ವಿನಯ ಮತ್ತು ನಿರ್ಲಿಪ್ತತೆಯನ್ನು** ತಮ್ಮ ಜೀವನದ ಭಾಗವಾಗಿಸಿಕೊಂಡಿದ್ದರು. ಇದೇ ಗುಣಗಳು ಅವರನ್ನು ಕೇವಲ ಮಹಾನ್ ನಟನಲ್ಲದೆ ಕನ್ನಡಿಗರ **ಜನನಾಯಕನನ್ನಾಗಿ** ಮಾಡಿವೆ.
೮. ರಾಜ್ಕುಮಾರ್ ಸಿನಿಮಾ ಕ್ಷೇತ್ರದಲ್ಲಿ ಮಾಡಿದ ಸಾಧನೆಗಳ ವಿವರಗಳನ್ನು ಬರೆಯಿರಿ
ಉತ್ತರ: ಡಾ. ರಾಜ್ಕುಮಾರ್ ಅವರು ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದರಾಗಿದ್ದು, ತಮ್ಮ ಪ್ರತಿಭೆ, ಪರಿಶ್ರಮ ಮತ್ತು ವಿಶಿಷ್ಟ ಅಭಿನಯದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಅವರು **1954ರಲ್ಲಿ ‘ಬೇಡರ ಕಣ್ಣಪ್ಪ’** ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸಿದರು. ಆಗ ಕನ್ನಡ ಚಿತ್ರರಂಗವು ತಮಿಳು ಮತ್ತು ತೆಲುಗು ಚಿತ್ರರಂಗಗಳಿಗಿಂತ ಸೀಮಿತವಾಗಿದ್ದರೂ, ರಾಜ್ಕುಮಾರ್ ಅವರು ತಮ್ಮ ಪ್ರತಿಭೆಯಿಂದ ಕನ್ನಡ ಚಿತ್ರರಂಗಕ್ಕೆ ಹೊಸ ಬಲ ನೀಡಿದರು.
ಆರಂಭದಲ್ಲಿ ಭಕ್ತಿ ಮತ್ತು ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸಿದ ಅವರು ನಂತರ **ಐತಿಹಾಸಿಕ, ಸಾಮಾಜಿಕ, ಕೌಟುಂಬಿಕ, ಜಾನಪದ ಮತ್ತು ಭಕ್ತಿಪ್ರಧಾನ** ಸೇರಿದಂತೆ ವಿವಿಧ ಬಗೆಯ ಪಾತ್ರಗಳನ್ನು ನಿರ್ವಹಿಸಿದರು. ಅವರ ಅಭಿನಯದ ವೈಶಿಷ್ಟ್ಯವೆಂದರೆ ಪಾತ್ರಗಳನ್ನು ಅತಿರೇಕವಿಲ್ಲದೆ ಸಹಜವಾಗಿ ನಿರ್ವಹಿಸುವುದು. ತಮ್ಮದೇ ಆದ ವಿಶಿಷ್ಟ ಅಭಿನಯ ಶೈಲಿಯನ್ನು ರೂಪಿಸಿಕೊಂಡ ಅವರು ಕನ್ನಡಿಗರಿಗೆ ಸಹಜವಾದ ಅಭಿನಯದ ಮಾದರಿಯಾದರು.
ರಾಜ್ಕುಮಾರ್ ಅವರ **ವಾಚಿಕಾಭಿನಯ, ಶುದ್ಧ ಕನ್ನಡ ಉಚ್ಚಾರಣೆ, ಧ್ವನಿಯ ಏರಿಳಿತ, ಮುಖಭಾವ ಮತ್ತು ಪಾತ್ರಕ್ಕೆ ತಕ್ಕಂತೆ ವಸ್ತುಗಳನ್ನು ಬಳಸುವ ಸಹಜತೆ** ವಿಶೇಷವಾಗಿತ್ತು. ಅವರು ವೀಣೆ, ಕೊಳಲು, ಸನಾದಿ ನುಡಿಸುವುದು, ನೇಗಿಲು ಹಿಡಿಯುವುದು, ಚಪ್ಪಲಿ ಹೊಲಿಯುವುದು ಮುಂತಾದ ಕಸುಬುಗಳನ್ನು ಮಾಡುವಾಗಲೂ ನಿಜವಾಗಿಯೇ ಆ ಕೆಲಸದಲ್ಲಿ ಪರಿಣತರಂತೆ ಕಾಣುತ್ತಿದ್ದರು.
ಅವರ ಸಿನಿಮಾಗಳು ಜನರ ಮೇಲೂ ಗಾಢವಾದ ಪ್ರಭಾವ ಬೀರಿದವು. **‘ಬಂಗಾರದ ಮನುಷ್ಯ’, ‘ನಮ್ಮ ಸಂಸಾರ’, ‘ಚಂದವಳ್ಳಿಯ ತೋಟ’, ‘ಕರುಳಿನ ಕರೆ’, ‘ಜೀವನ ಚೈತ್ರ’, ‘ಭಕ್ತ ಕುಂಬಾರ’, ‘ಮಂತ್ರಾಲಯ ಮಹಾತ್ಮ’** ಮುಂತಾದ ಚಿತ್ರಗಳು ಜನರ ಕುಟುಂಬ ಜೀವನ, ಸಾಮಾಜಿಕ ಚಿಂತನೆ ಮತ್ತು ಧಾರ್ಮಿಕ ಭಾವನೆಗಳ ಮೇಲೆ ಪ್ರಭಾವ ಬೀರಿದವು.
1961ರ ನಂತರ ಕನ್ನಡ ಚಿತ್ರರಂಗದ ಬೆಳವಣಿಗೆಯಲ್ಲಿ ರಾಜ್ಕುಮಾರ್ ಅವರ ಪಾತ್ರ ಇನ್ನಷ್ಟು ದೊಡ್ಡದಾಯಿತು. 1961ರ ಅಂತ್ಯದವರೆಗೆ 113 ಕನ್ನಡ ಚಿತ್ರಗಳು ಬಿಡುಗಡೆಯಾಗಿದ್ದರೆ, ಮುಂದಿನ ಹತ್ತು ವರ್ಷಗಳಲ್ಲಿ ಈ ಸಂಖ್ಯೆ 370ಕ್ಕೆ ಏರಿತು. ಇದೇ ಅವಧಿಯಲ್ಲಿ ರಾಜ್ಕುಮಾರ್ ಅವರು **121 ಚಿತ್ರಗಳಲ್ಲಿ** ಅಭಿನಯಿಸಿದ್ದರು. 1968ರ ಒಂದೇ ವರ್ಷದಲ್ಲಿ ಅವರ ನಾಯಕತ್ವದ **16 ಚಿತ್ರಗಳು** ಬಿಡುಗಡೆಯಾಗಿದ್ದವು.
ಗೋಕಾಕ್ ಚಳುವಳಿಯಲ್ಲಿ ಭಾಗವಹಿಸುವ ಮೂಲಕ ಅವರು ಕನ್ನಡ ಭಾಷೆಯ ಪರವಾಗಿ ನಿಂತರು. ಇದರಿಂದ ಅವರು ಕೇವಲ ನಟನಾಗಿ ಉಳಿಯದೆ **ಕನ್ನಡದ ಸಾಂಸ್ಕೃತಿಕ ನಾಯಕ ಮತ್ತು ಜನನಾಯಕ** ಎಂಬ ಸ್ಥಾನವನ್ನು ಪಡೆದರು.
ಒಟ್ಟಿನಲ್ಲಿ, ರಾಜ್ಕುಮಾರ್ ಅವರು ತಮ್ಮ **ಅಪೂರ್ವ ಪ್ರತಿಭೆ, ವಿಶಿಷ್ಟ ಅಭಿನಯ, ಶುದ್ಧ ಕನ್ನಡ ಉಚ್ಚಾರಣೆ, ವೈವಿಧ್ಯಮಯ ಪಾತ್ರಗಳು, ಸಾಮಾಜಿಕ ಕಾಳಜಿ ಮತ್ತು ಕನ್ನಡಪರ ನಿಲುವುಗಳಿಂದ** ಕನ್ನಡ ಚಿತ್ರರಂಗಕ್ಕೆ ಒಳಬಲ ನೀಡಿದರು. ಆದ್ದರಿಂದ ಅವರು ಕನ್ನಡ ಚಿತ್ರರಂಗದ **ಮೊದಲ ‘ಸ್ಟಾರ್’ ಹಾಗೂ ಅಪ್ರತಿಮ ಕಲಾವಿದ**ರಾಗಿ ಶಾಶ್ವತ ಸ್ಥಾನ ಪಡೆದಿದ್ದಾರೆ.
