೧.೧ ಶಕುಂತಳೋಪಾಖ್ಯಾನ
ಪ್ರವೇಶಿಕೆ
ಭಾರತೀಯ ಸಂಸ್ಕೃತಿಯು ಹೆಣ್ಣನ್ನು ದೈವಸ್ವರೂಪವಾಗಿ ಕಂಡರೂ ಆಕೆಯನ್ನು ಅನಾದಿ ಕಾಲದಿಂದಲೂ ಶೋಷಿಸುತ್ತಾ ಬಂದಿದೆ. ಆಧುನಿಕ ಯುಗದಲ್ಲೂ ಹೆಣ್ಣಿನ ಶೋಷಣೆಯು ವಿವಿಧ ರೂಪಗಳಲ್ಲಿ ಕಂಡುಬರುತ್ತಿದೆ. ನಗರೀಕರಣ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳೆವಣಿಗೆಯ ಯುಗದಲ್ಲಿಯೂ ಹೆಣ್ಣು ಹಲವು ಸವಾಲು ಸಮಸ್ಯೆಗಳನ್ನು ಎದುರಿಸುತ್ತಿದ್ದಾಳೆ ಶೋಷಣೆಯ ವಿರುದ್ಧ ಪ್ರತಿಭಟಿಸುವ ಹಕ್ಕನ್ನು ಆಕೆ ಪಡೆದಿದ್ದರೂ ಅದು ಇಂದಿಗೂ ನಿರೀಕ್ಷಿತ ಮಟ್ಟವನ್ನು ತಲಪದಿರುವುದು ದುಃಖಕರ ಸಂಗತಿಯಾಗಿದೆ. ಶೋಷಣೆಯ ವಿರುದ್ಧ ಪ್ರತಿಭಟಿಸುವ ಶಕ್ತಿಯನ್ನು ಮಹಿಳೆಯರು ಹೊಂದಿದಾಗ ಮಾತ್ರ ಸಮಾಜದಲ್ಲಿ ಪುರುಷನಷ್ಟೇ ಸಮರ್ಥಳಾಗಿ ಆಕೆಯೂ ಬದುಕಬಲ್ಲಳು. ಪ್ರಸ್ತುತ ಕವಿತೆಯಲ್ಲಿ ಶಕುಂತಲೆಯನ್ನು ಪ್ರೇಮವಿವಾಹವಾಗಿ ಆನಂತರ ಆಕೆಯಿಂದ ದೂರವಿದ್ದು ಮತ್ತೆ ಆಕೆಯನ್ನು ಬಯಸಿ ಬಂದ ಅರಸನಾದ ದುಷ್ಯಂತನಿಗೆ ಶಕುಂತಲೆಯು ತಿರಸ್ಕಾರವನ್ನು ತೋರುವ ಅಂಶವನ್ನು ಮನಗಾಣಬಹುದು.
ಆಧುನಿಕ ಮತ್ತು ಸ್ತ್ರೀವಾದಿ ದೃಷ್ಟಿಕೋನದಿಂದ ಮರುಚಿಂತನೆಗೆ ಒಳಪಡಿಸಿದಂತಿದೆ. ಶಕುಂತಲೆಯ ಹರೆಯದಲ್ಲಿ ಮೂಡುವ ಮುಗ್ಧತೆ, ಪ್ರೇಮ, ಭಂಗ ಮತ್ತು ಅಂತಿಮವಾಗಿ ಅವಳಲ್ಲಿ ಮೂಡುವ ಪ್ರೌಢಿಮೆಯನ್ನು ಈ ಸಾಲುಗಳು ಅದ್ಭುತವಾಗಿ ಚಿತ್ರಿಸಿವೆ.
ಕವಿತೆಯ ಆರಂಭದಲ್ಲಿ ಶಕುಂತಲೆಯ ಸೌಂದರ್ಯವನ್ನು ಕೇವಲ ದೈಹಿಕವಾಗಿ ಮಾತ್ರವಲ್ಲದೆ, ಆಕೆಯ ಸುತ್ತಲಿನ ಪರಿಸರದೊಂದಿಗೆ ಸಮೀಕರಿಸಲಾಗಿದೆ. ಆರಮನೆಯ ಉದ್ಯಾನದ ಕೃತಕತೆಗೆ ದೇಸತ್ತಿದ್ದ ದುಷ್ಯಂತನಿಗೆ, ಅಡವಿಯ 'ವನಜ್ಯೋತ್ಸೆ'ಯಂತೆ ಕಂಗೊಳಿಸುವ ಶಕುಂತಲೆ ಅಪ್ತವಾಗುತ್ತಾಳೆ.
ಅವಳು ಗಿಡದೊಂದಿಗೆ ಗಿಡವಾಗಿ, ಹುಲ್ಲೆಮರಿಯೊಂದಿಗೆ ತಾದಾತ್ಮ ಹೊಂದಿದವಳು. ದುಷ್ಯಂತನ ಬಿಗಿಯಪ್ಪುಗೆಯಲ್ಲೂ ಅವಳಿಗೆ ಜಿಂಕೆಮರಿಯ ಸೆಳೆತವಿತ್ತು ಎನ್ನುವುದು ಅವಳ ಮುಗ್ಧತೆ ಮತ್ತು ನಿಸರ್ಗದ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.
ಅಪ್ಸರೆಯ ಮಗಳಾದ ಅವಳ ಹರೆಯದಲ್ಲಿ ಉಗುರಿನ ತುದಿಯಲ್ಲೂ ಸೌಂದರ್ಯವಿತ್ತು. ಈ ಸೌಂದರ್ಯವೇ ಬೇಟೆಗಾರನಾಗಿ ಬಂದ ದುಷ್ಯಂತನನ್ನು ಅವಳ ಪ್ರೇಮದ ಬೇಟೆಯಾಗುವಂತೆ ಮಾಡುತ್ತದೆ.
ದುಷ್ಯಂತನು ಪ್ರೇಮದ ಗುರುತಾಗಿ ಉಂಗುರವನ್ನಿಟ್ಟು, 'ಅಕ್ಷರ ಎಣಿಸುವಷ್ಟರಲ್ಲಿ ಮರಳಿ ಬರುವೆ' ಎಂಬ ಭರವಸೆ ನೀಡಿ ಹೋಗುತ್ತಾನೆ. ಆದರೆ ಆ ಭರವಸೆ ಹುಸಿಯಾದಾಗ ಶಕುಂತಲೆ 'ಚಿತ್ರದಲ್ಲಿ ಬರೆದ ಪ್ರತಿಮೆಯಂತೆ" ಜೀವಕಳೆ ಕಳೆದುಕೊಳ್ಳುತ್ತಾಳೆ. ಇಲ್ಲಿ ಶಕುಂತಲೆಯ ಪ್ರೇಮವು ಕೇವಲ ಭಾವನೆಯಾಗಿ ಉಳಿಯದೆ, ಅವಳ ಹೊಟ್ಟೆಯಲ್ಲಿ 'ಕುಡಿಯಾಗಿ' (ಗರ್ಭ) ಬೆಳೆಯತೊಡಗುತ್ತದೆ.
ಈ ಕವಿತೆಯು ಪ್ರೇಮದ ಮುಗ್ಧತೆಯಿಂದ ಆತ್ಮಗೌರವದ ಪ್ರೌಢಿಮೆಯೆಡೆಗಿನ ಪಯಣವನ್ನು ಸಾರುತ್ತದೆ. ಹೆಣ್ಣು ಕೇವಲ ಪುರುಷನ ನೆನಪಿನ ಉಂಗುರಕ್ಕಾಗಿ ಕಾಯುವ ಅಬಲೆಯಲ್ಲ ಅವಳು ನೋವನ್ನು ನುಂಗಿ ತನ್ನ ಆಸ್ಮಿತೆಯನ್ನು ಕಂಡುಕೊಳ್ಳಬಲ್ಲವಳು ಎಂಬುದು ಇಲ್ಲಿನ ಪ್ರಮುಖ ಆಶಯ. ದುಷ್ಯಂತನ ಪ್ರೇಮ ಚಂಚಲವಾಗಿದ್ದರೆ, ಕಕುಂತಲೆಯ ವ್ಯಕ್ತಿತ್ವವು ಹಿಮದಂತೆ ಘನೀಕೃತಗೊಂಡು ಸ್ಥಿರವಾಗಿದೆ.
ಅಪ್ಸರೆಯ ಮಗಳು.
ಕೂದಲೆಳೆಯಲ್ಲಿ, ಉಗುರ ತುದಿಯಲ್ಲೂ ಸೌಂದರ್ಯ! ಆಶ್ರಮದ ತರು, ಲತೆಗೂ ಉಕ್ಕಿ ಬಂದು ಜೀವೋನ್ಮಾದ ಧುಮ್ಮಿಕ್ಕಿ ಹರಿವ ಎದೆಯೀಗ ಹುಚ್ಚುಹೊಳೆ,
ಪುರುಕುಲದ ಅರಸು ಬೇಟೆಗೆ ಬಂದವನು, ಬೇಟೆಯಾಡಿಯೆ ಬಿಟ್ಟ! ಗಿಡದೊಂದಿಗೆ ಗಿಡವಾದವಳ, ಹುಲ್ಲೆಮರಿಯಾದವಳ ಅಂಗುಲಂಗುಲವೂ ನಿಸರ್ಗವೇ ಆದವಳ! ಉದ್ಯಾನ ಲತಾವಳಿಗಳ ಕೃತಕತೆಗೆ ಬೇಸತ್ತವನಿಗೆ ವನಜ್ಯೋತ್ಸೆಯ ಒಡಲಲ್ಲಿ ಏನೋ ಉನ್ಮಾದ ಮಷ್ಯಂತನ ಬಿಸಿಯಪ್ಪುಗೆಯಲ್ಲೂ ಶಕುಂತಳೆಗೆ ಮಾತ್ರ ಜಿಂಕೆಮರಿಯ ಸೆಳೆತ!
'ಎಷ್ಟಾದರೂ ಅರಣ್ಯವಾಸಿಯಲ್ಲವೆ ನೀನು?” ಮತ್ತೇರಿ ನಕ್ಕವನು ಉಂಗುರವಿಟ್ಟ ನಡೆದೇಬಿಟ್ಟ ಉಂಗುರದ ಒಂದೊಂದಕ್ಷರದ ಎಣಿಕೆ ಮುಗಿವ ಮುನ್ನ ಬರುವನೆಂದವನು ಬರಲೇ ಇಲ್ಲ!
ಚಿತ್ರದಲಿ ಬರೆದ ಪ್ರತಿಮೆಯಾದಳು ಹುಡುಗಿ ಬಸಿರಲ್ಲಿ ಮೊಳಕೆಯೊಡೆದ ಕುಡಿ, ತಿದಿಯೊತ್ತುವಾತಂಕ, ಚಿತ್ರದಲಿ ಬರೆದ ಪ್ರತಿಮೆಯಾದಳು ಹುಡುಗಿ
ದೂರ್ವಾಸನ ಶಾಪ ಎದೆ ತಟ್ಟಲಿಲ್ಲ. ಮನ ಮುಟ್ಟಲಿಲ್ಲ ಗೆಳತಿ ಪ್ರಿಯಂವದೆ, ಎಷ್ಟೆಂದರೂ ಪ್ರಿಯಂವದೆ ಸುಮ್ಮನಾದಳು.
'ಮಲ್ಲಿಗೆಯ ಬಳ್ಳಿಗೆ ಬಿಸಿ ನೀರೆರೆಯುವರೆ?'
ಕರ್ತವ್ಯಮುಖ ಕಣ್ವರಿಗೀಗ ಆಶ್ರಮದ ಲತೆಯ ಅರಮನೆಗೆ ಹಬ್ಬಿಸುವಾಸೆ. ಕೀಳಲಾಗದು ಹೆಜ್ಜೆ, ವನಜ್ಯೋತ್ಸ ಶಕುಂತಳೆಗೆ ಬೇರು ಕಿತ್ತಭಾವ!
ಇತ್ತ ಹಿಮಕರ ಕುಲದ ಅರಸು ಹಿಮವಂತನೇ ಆದ! ನೆಚ್ಚಿಗೆಯ ಉಂಗುರವೂ ಶಚಿಯಲ್ಲಿ ಲಜ್ಜೆ, ಭಯ, ಆತಂಕ ಕೊನೆಗೆ ಮುಸುಕು ತೆರೆದಳು
'ಅನಾರ್ಯ!'
ತಾಯ್ತನದ ಕರುಳು ಚುರೆಂ೯ದಿರಬೇಕು ಮೇನಕೆಗೆ ಕಂಗೆಟ್ಟ ಹುಡುಗಿಗೊಂದಿಷ್ಟು ಆಸರೆ, ಆಸೆ, ಬದುಕು, ಕನಸುಗಳ ದಹಿಸಿಯೇ ಬಂದ 'ಸರ್ವದಮನ!'
ಪುರುಕುಲದ ಉತ್ತರಾಧಿಕಾರಿ, ಸಿಂಹದ ಮರಿ ಭರತನಿಗಾಗಿಯೇ ಇರಬೇಕು, ಧಾವಿಸಿ ಬಂದ ದುಷ್ಯಂತ. ದೂರ್ವಾಸನ ಶಾಪ, ಉಂಗುರದ ನೆಪ
ಒಡ್ಡಿನಿಂತವನ ನೋಡಿ ನಕ್ಕಳು ('ನೋವುಂಡು ನಕ್ಕ ನಗೆ ನಗೆಯಲ್ಲ') ಚಿಗುರು ಬೆರಳಿಗೆ ಮತ್ತೆ ಉಂಗುರದ ಸಂಭ್ರಮ ಹಿಮಗಟ್ಟಿದ ಹುಡುಗಿ ತಣ್ಣಗೆ ನುಡಿದಳು ಅಲ್ಲಲ್ಲ ಪ್ರೌಢ
'ನನಗೆ ಈ ಉಂಗುರದಲ್ಲಿ ನೆಚ್ಚಿಗೆಯಿಲ್ಲ'.
ಕವಯಿತ್ರಿ ಪರಿಚಯ :
ಎಂ.ಆರ್.ಕಮಲ
ಎಂ. ಆರ್ ಕಮಲ ಅವರು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಮೇಟಿಕುರ್ಕೆಯವರು. ಹುಟ್ಟಿದ್ದು: ೧೯೫೯ರಲ್ಲಿ, ಬೆಂಗಳೂರು ವಿಶ್ವವಿದ್ಯಾಲಯದ ಎಂ.ಎ., ಎಲ್.ಎಲ್.ಬಿ. ಪದವೀಧರೆಯಾದ ಇವರು ಫ್ರೆಂಚ್ಚಾಷೆಯಲ್ಲಿಯೂ ಪದವೀಧರರು. ಪ್ರಕಟಿತ ಕಾವ್ಯಸಂಗ್ರಹಗಳು ಶಕುಂತಲೋಪಾಖ್ಯಾನ (೧೯೮೮), ಚಾಣೆ ಮತ್ತು ಇತರಕವಿತೆಗಳು (೧೯೯೨), ಇವುಗಳು ಕ್ರಮವಾಗಿ ಮಾತೋ ಶ್ರೀರತ್ನಮ್ಮಹೆಗ್ಗಡೆ ಸ್ಮಾರಕ ಪುರಸ್ಕಾರ ಹಾಗೂ ಮುದ್ದಣಕಾವ್ಯಪ್ರಶಸ್ತಿ ಪಡೆದಿವೆ. ಹೂವುಚೆಲ್ಲಿದ ಹಾದಿ. (೨೦೦೭), ಮಾರಿಬಿಡಿ (೨೦೧೭), ಗದ್ಯಗಂಧಿ (೨೦೨೦), ನೆಲದಾಸೆಯ ನಕ್ಷತ್ರಗಳು (೨೦೨೧).ಈಗಿಲ್ಲಿ ಎಲ್ಲವೂ ಮೆಸ್ತಿ (೨೦೨೪) ಸೇರಿದಂತೆ ೨೫ ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕಾವ್ಯ ಕ್ಷೇತ್ರದಲ್ಲಿನ ಸಾಧನೆಗಾಗಿ ೨೦೧೮ನೇ ಸಾಲಿನ ಮಾಸ್ತಿಪ್ರಶಸ್ತಿಯನ್ನು ಪಡೆದಿದ್ದಾರೆ. ಕಿ.ರಂ.ಕಾವ್ಯ ಪುರಸ್ಕಾರವೂ ದೊರೆತಿದೆ.
ಕನ್ನಡದಲ್ಲಿ ಮೊದಲ ಬಾರಿಗೆ ಕಪ್ಪುಕವಿಗಳನ್ನು ಪರಿಚಯಿಸುವ ಪ್ರಯತ್ನ ಓದುಗರ ಗಮನ ಮತ್ತು ವಿಮರ್ಶಕರ ಮಾನ್ಯತೆ ಎರಡನ್ನೂ ಪಡೆಯಿತು. ಇವರ 'ಕಪ್ಪುಹಕ್ಕಿಯ ಬೆಳಕಿನ ಹಾಡು' ಕೃತಿಯಲ್ಲಿ ಆಫ್ರಿಕನ್-ಅಮೆರಿಕನ್ ಸಮಾಜ ವಿಕಾಸಗೊಂಡ ಬಗೆ, ಗುಲಾಮಗಿರಿ ಪದ್ಧತಿಯ ವಿರುದ್ಧ ಅವರ ಹೋರಾಟ, ಮಹಿಳೆಯರು ಸಾಹಿತ್ಯದ ಮೂಲಕ ತಮ್ಮ ಅಭಿವ್ಯಕ್ತಿಯನ್ನು ಪಡೆದುಕೊಳ್ಳಲು ಮಾಡಿದ ಹೋರಾಟಗಳ ಘಟನೆಗಳಿವೆ. ವಂಗಾರಿಮಥಾಯ್ ಅವರ ಆತ್ಮಕತೆಯನ್ನು 'ಮತ್ತೆಮೇಲೇಳುತ್ತೇನೆ' (೨೦೨೪)ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ. ಲ್ಯಾಟಿನ್ ಅಮೆರಿಕಾದ ಬರಹಗಾರ್ತಿ ಇಸಬೆಲ್ ಆಯೆಂದೆಯವರ ಆತ್ಮಕತೆಯ ಅನುವಾದ 'ಜೀವದನಿ'(೨೦೨೫)ರಲ್ಲಿ ಪ್ರಕಟಗೊಂಡಿದೆ.
ಪದಗಳ ಕೋಶ :
ತರು ಮರ, ಲತೆ ಬಳ್ಳಿ ಹುಲ್ಲೆ-ಜಿಂಕೆ, ಚಿಗರೆ, ವನಜ್ಯೋ ಹಿಮಕರ - ಚಂದ್ರ (ತಂಪಾದ ಕಿರಣಗಳಿಂದ ಕೂಡಿದವನು): ಲಷ್ಟೆ ನಾಚಿಕೆ, ಸಂಕೋಚ.
ಮಹೂಂತ : ಚಂದ್ರವಂಶದ ಇಲಿಲ ಮತ್ತು ರಥಂತರಿಯ ಮಗ. ದುಷ್ಯಂತನ ಮೊದಲ ಹೆಂಡತಿ ಲಾಕ್ಷಿ ಇವನ ಎರಡನೆಯ ಹೆಂಡತಿ ಶಕುಂತಲೆ,
ಶಕುಂತಲೆ : ವಿಶ್ವಾಮಿತ್ರ ಮುನಿ ಮತ್ತು ಅಪ್ಸರೆಯಾದ ಮೇನಕೆಯ ಮಗಳು ತಂದೆತಾಯಿಗಳಿಬ್ಬರೂ ಈಕೆಯನ್ನು ತ್ಯಜಿಸಿ ಹೋದಾಗ ಶಕುಂತ ಪಕ್ಷಿಗಳು ಪೋಷಿಸಿದುವು. ಆನಂತರ ಕಣ್ವ ಮುನಿಗಳು ಆಶ್ರಯವಿತ್ತರು. ನಂತರ ದುಷ್ಯಂತನೊಂದಿಗೆ ವಿವಾಹವಾಗುತ್ತಾಳೆ.
ಸರ್ವದಮನ : ದುಷ್ಯಂತ ಮತ್ತು ಶಕುಂತಲೆಯರ ಮಗ ಅನಂತರದಲ್ಲಿ ಇವನಿಗೆ ಭರತ ಚಕ್ರವರ್ತಿ ಎಂಬ ಹೆಸರು ಬಂತು.
ಸಂಭಾವ್ಯ ಪ್ರಶ್ನೆಗಳು:
1) ಶಕುಂತಲೆಯ ಸೌಂದರ್ಯ ಎಂತಹದ್ದು?
2) ಪುರುಕುಲದ ಅರಸು ಯಾರನ್ನು ಬೇಟೆಯಾಡಿದ?
3) ಕಂಗೆಟ್ಟ ಶಕುಂತಲೆಗೆ ತಾಯಿಯ ಆಸರೆ ಸಿಕ್ಕಿದ್ದು ಹೇಗೆ?
4) ಶಕುಂತಲೆಯ ಬಳಿಗೆ ದುಷ್ಯಂತ ಧಾವಿಸಿ ಬಂದದ್ದು ಏಕೆ?
5) ದುಷ್ಯಂತನು ಶಕುಂತಲೆಗೆ ಉಂಗುರವಿಟ್ಟು ಹೋದ ಸನ್ನಿವೇಶವನ್ನು ಬರೆಯಿರಿ.
6) ಶಕುಂತಲೆಯು 'ನನಗೆ ಈ ಉಂಗುರದಲ್ಲಿ ನೆಚ್ಚಿಗೆಯಿಲ್ಲ' ಎನ್ನಲು ಕಾರಣವೇನು?
7) ಶಕುಂತಳೋಪಾಖ್ಯಾನ ಪದ್ಯದಲ್ಲಿ ಪ್ರಕೃತಿಯ ವರ್ಣನೆಯನ್ನು ವಿವರಿಸಿ.
8) 'ನೋವುಂಡು ನಕ್ಕ ನಗೆ ನಗೆಯಲ್ಲ' ಎಂಬುದು ಶಕುಂತಲೋಪಾಖ್ಯಾನ ಪದ್ಯದಲ್ಲಿ ಹೇಗೆ ಅನಾವರಣಗೊಂಡಿದೆ? ವಿವರಿಸಿ.
ಅಭ್ಯಾಸ ಚಟುವಟಿಕೆಗಳು :
1) 'ಆಧುನಿಕ ಕಾಲಘಟ್ಟದಲ್ಲಿ ಹೆಣ್ಣಿನ ಶೋಷಣೆಯ ವಿವಿಧ ರೂಪಗಳು' ಕುರಿತಂತೆ ಚರ್ಚಾ ಸ್ಪರ್ಧೆ ಏರ್ಪಡಿಸಿ.
2) ಉನ್ನತ ಶಿಕ್ಷಣದ ಮೂಲಕ ಹೆಣ್ಣಿನ ಬದುಕಿನ ಸುಧಾರಣೆ ಸಾಧ್ಯವೇ ? ಎಂಬುದರ ಬಗ್ಗೆ ಗುಂಪು ಚರ್ಚೆ ಮಾಡಿ.
3) ಕರ್ನಾಟಕದಾದ್ಯಮಶೀಲ ಮಹಿಳಾ ಸಾಧಕರ ಯಶೋಗಾಥೆಯ ಬಗ್ಗೆ ಮಾಹಿತಿ ಸಂಗ್ರಹಿಸಿ.
ಪೂರಕ ಓದು :
1. ಕಥೆ : ನಾನು ಪ್ರೇಮಿಸಿದ ಹುಡುಗಿ- ಪ್ರೊ. ಸುಧಾಕರ್
2. ಜನಪದ ಕಥೆ : ಮೈನಾವತಿ- (ಸಂಗ್ರಹ)- ಸಿಂಪಿ ಲಿಂಗಣ್ಣ
3. ಕವನ: ಮೊದಲ ಪ್ರೀತಿ- ಕೆ.ಎಸ್ ನರಸಿಂಹಸ್ವಾಮಿ
