ಬಿ.ಎಸ್ಸಿ ಪ್ರಥಮ ಸೆಮಿಸ್ಟರ್ ಕನ್ನಡ.
ಮಕ್ಕಳಿಗೇಕೆ ವೈಚಾರಿಕತೆ ? ಕುವೆಂಪು
ಲೇಖಕರ ಪರಿಚಯ : ರಾಷ್ಟ್ರಕವಿ ಕುವೆಂಪು
ಕನ್ನಡದ ಜ್ಞಾನಪೀಠ
ಪ್ರಶಸ್ತಿ ವಿಜೇತ, ಯುಗದ ಕವಿ, ಜಗತ್ಕವಿ ರಾಷ್ಟ್ರಕವಿ ಕುವೆಂಪು (ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ)
ಅವರು ಡಿಸೆಂಬರ್ ೨೯, ೧೯೦೪ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು.
ತಂದೆ ವೆಂಕಟಪ್ಪ, ತಾಯಿ ಸೀತಮ್ಮ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಎಂ.ಎ. ಪದವಿ ಪಡೆದ ಇವರು,
ಅದೇ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ, ನಂತರ ಮೈಸೂರು ವಿಶ್ವವಿದ್ಯಾನಿಲಯದ
ಉಪಕುಲಪತಿಗಳಾಗಿ ಕಾರ್ಯನಿರ್ವಹಿಸಿದರು.
ಇವರ ಪ್ರಮುಖ ಕವನ
ಸಂಕಲನಗಳು: 'ಅಮಲನ ಕಥೆ', 'ಬೊಮ್ಮನಹಳ್ಳಿಯ ಕಿಂದರಿಜೋಗಿ', 'ಕೊಳಲು', 'ಪಂಚಜನ್ಯ', 'ಪ್ರೇಮಕಾಶ್ಮೀರ',
'ಪಕ್ಷಿಕಾಶಿ', 'ಚಂದ್ರಮಂಚಕ್ಕೆ ಬಾ ಚಕೋರಿ' ಇತ್ಯಾದಿ. 'ಚಿತ್ರಾಂಗದಾ' ಇವರ ಖಂಡಕಾವ್ಯ. 'ಕಾನೂರು
ಸುಬ್ಬಮ್ಮ ಹೆಗ್ಗಡಿತಿ' ಮತ್ತು 'ಮಲೆಗಳಲ್ಲಿ ಮದುಮಗಳು' ಪ್ರಸಿದ್ಧ ಕಾದಂಬರಿಗಳು. 'ಯಮನ ಸೋಲು',
'ಜಲಗಾರ', 'ಶೂದ್ರ ತಪಸ್ವಿ', 'ಮಹಾರಾತ್ರಿ', 'ರಕ್ತಾಕ್ಷಿ', 'ಬೆರಳೆಗೆ ಕೊರಳ್' ಅವರ ಪ್ರಮುಖ ನಾಟಕಗಳು.
'ನೆನಪಿನ ದೋಣಿಯಲ್ಲಿ' ಇವರ ಆತ್ಮಕಥೆಯಾಗಿದೆ.
ಕುವೆಂಪು ಅವರ ಮಹಾಕಾವ್ಯ
'ಶ್ರೀ ರಾಮಾಯಣ ದರ್ಶನಂ' ಕೃತಿಗೆ ೧೯೬೭ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ೧೯೫೫ರಲ್ಲಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೧೯೬೪ರಲ್ಲಿ ಕರ್ನಾಟಕ ಸರ್ಕಾರದಿಂದ 'ರಾಷ್ಟ್ರಕವಿ' ಬಿರುದು,
ಪದ್ಮವಿಭೂಷಣ, ನಾಡೋಜ ಹಾಗೂ ಗೌರವ ಡಾಕ್ಟರೇಟ್ ಪದವಿಗಳು ಇವರಿಗೆ ಸಂದಿವೆ.
ಮಕ್ಕಳಿಗೇಕೆ ವೈಚಾರಿಕತೆ? - ಪಾಠದ
ಸಮಗ್ರ ಸಾರಾಂಶ
ಬಾಲ್ಯವು ವ್ಯಕ್ತಿಯ
ಸಾಮಾಜಿಕ ಸಂಬಂಧಗಳನ್ನು, ಮೌಲ್ಯಗಳನ್ನು ಹಾಗೂ ನಡವಳಿಕೆಗಳನ್ನು ರೂಪಿಸುವ ಅತ್ಯಂತ ಮಹತ್ವದ ಅವಧಿಯಾಗಿದೆ.
ಈ ಅವಧಿಯಲ್ಲಿ ಮಕ್ಕಳಲ್ಲಿ ನೈತಿಕ ಮತ್ತು ವೈಚಾರಿಕ ಜಾಗೃತಿಯನ್ನು ಉಂಟುಮಾಡುವುದು ಸಮ ಸಮಾಜದ ನಿರ್ಮಾಣಕ್ಕೆ
ಅತ್ಯಂತ ಅಗತ್ಯವಾಗಿದೆ ಎಂದು ಕುವೆಂಪು ಅವರು ಈ ಪಾಠದಲ್ಲಿ ಪ್ರತಿಪಾದಿಸುತ್ತಾರೆ.
ಶ್ರದ್ಧೆ ಮತ್ತು ವಿಚಾರಬುದ್ಧಿಯ
ವಿಕಾಸ
ಲೋಕಕ್ಕೆ ಹೊಸದಾಗಿ
ಕಾಲಿಟ್ಟಿರುವ ಮಗುವಿಗೆ ಆರಂಭದಲ್ಲಿ ಹಿರಿಯರ, ತಂದೆ-ತಾಯಂದಿರ ಬುದ್ಧಿವಾದ ಹಾಗೂ ಶ್ರದ್ಧೆ ಅಗತ್ಯವಾಗಿರುತ್ತದೆ.
ಏಕೆಂದರೆ ಮಗುವಿನ ಕಾಲಡಿ ಲೋಕಾನುಭವದ ನೆಲಗಟ್ಟು ಸ್ಥಿರವಾಗಿರುವುದಿಲ್ಲ. ಸ್ವತಃ ಆಲೋಚಿಸಿ ನಡೆಯುವ
'ವಿಚಾರಬುದ್ಧಿ' ಆರಂಭದಲ್ಲಿ ಅಪಾಯ ತರಬಹುದು. ಆದರೆ ಮಗು ಕೇವಲ ಶೂನ್ಯವಲ್ಲ; ಅದು ಬಹು ಜನ್ಮಗಳಲ್ಲಿ
ಸಂಚರಿಸಿ, ಅನುಭವಗಳ ಸಾರವನ್ನು ಸಂಸ್ಕಾರ ರೂಪದಲ್ಲಿ ಹುದುಗಿಸಿಕೊಂಡು ಬಂದಿರುವ 'ಅನಾದಿ ಅನಂತ ಅಮೃತ
ಚೇತನ'ವಾಗಿದೆ. ಎರಡು-ಮೂರು ವರ್ಷದ ಮಗು ಮಾತನಾಡಲು ಕಲಿತಾಗ 'ಅದೇನು? ಇದೇನು?' ಎಂದು ಪ್ರಶ್ನೆಗಳನ್ನು
ಕೇಳಿ ಹಿರಿಯರಿಂದ ಉತ್ತರ ಪಡೆಯುತ್ತದೆ. ದೊಡ್ಡವರು ಬೇರೆ ಬೇರೆ ಉತ್ತರಗಳನ್ನು ಕೊಟ್ಟಾಗ ಗೊಂದಲಗೊಂಡು,
ಯಾರ ಉತ್ತರ ನಂಬಬೇಕು ಎಂದು ವಿವೇಚಿಸುವಾಗ ಮಗುವಿನಲ್ಲಿ 'ವಿಚಾರಬುದ್ಧಿ'ಯ ಮೊಳಕೆಯೊಡೆಯುತ್ತದೆ.
ಕಥಾಲೋಕದಲ್ಲಿ 'ವಿಚಾರ
ವಿರಾಮ' ಮತ್ತು ಲೌಕಿಕ ಎಚ್ಚರ
ಮಗು ಕಥೆ ಕೇಳುವಾಗ
ಅತ್ಯಂತ ಉತ್ಸಾಹದಿಂದ ಇರುತ್ತದೆ. ಕಾಗೆ ಹಾಡುವುದೇ? ನರಿ ಮಾತನಾಡುತ್ತದೆಯೇ? ಎಂದು ತರ್ಕಿಸಿ ಕಥೆಯ
ಸ್ವಾರಸ್ಯವನ್ನು ಕೆಡಿಸಿಕೊಳ್ಳುವುದಿಲ್ಲ. ಕಾವ್ಯ/ಕಥಾ ಆಸ್ವಾದನೆಗಾಗಿ ತನ್ನ ವಿಚಾರಶಕ್ತಿಗೆ ತಾತ್ಕಾಲಿಕ
ವಿರಾಮ ('ವಿಚಾರ ವಿರಾಮ') ನೀಡಿ ಸತ್ಯವನ್ನು ಸ್ತಬ್ಧಗೊಳಿಸುತ್ತದೆ. ಆದರೆ ಕಥಾಲೋಕದಿಂದ ಲೌಕಿಕ ಜೀವನಕ್ಕೆ
ಬಂದಾಗ ಈ ವಿಚಾರಶಕ್ತಿಯು ಎಚ್ಚರದಿಂದಿರಬೇಕು. ಉದಾಹರಣೆಗೆ, ಗೋವಿನ ಕಥೆಯಲ್ಲಿ ಸತ್ಯನಿಷ್ಠೆಗೆ ಮೆಚ್ಚಿ
ಹುಲಿ ಗೋವನ್ನು ತಿನ್ನದೆ ಪ್ರಾಣತ್ಯಾಗ ಮಾಡಿತು ಎಂಬುದನ್ನು ಲೌಕಿಕದಲ್ಲೂ ಅಕ್ಷರಶಃ ನಂಬಿ ನಡೆದರೆ,
ನಿಜ ಜೀವನದ ದುಷ್ಟ ವ್ಯಾಘ್ರಗಳು ದುಷ್ಟರಾಗಿಯೇ ಉಳಿದು ಮನುಷ್ಯ ಅಪಾಯಕ್ಕೆ ಸಿಲುಕುತ್ತಾನೆ.
ಮತಾಭಿಮಾನ ಮತ್ತು
ಪುರಾಣ ಕಥೆಗಳ ವಿಚಾರಪರ ವಿಶ್ಲೇಷಣೆ
ಬಾಲ್ಯದಲ್ಲಿಯೇ ವೈಚಾರಿಕ
ಮನೋಧರ್ಮವನ್ನು ಬಿತ್ತದಿದ್ದರೆ, ಮಕ್ಕಳು ಪುರಾಣ ಕಥೆಗಳನ್ನು ಅಕ್ಷರಶಃ ಸತ್ಯವೆಂದು ನಂಬಿ ವೀರ ಮತಭ್ರಾಂತರಾಗುತ್ತಾರೆ.
ಉದಾಹರಣೆಗೆ, ಪ್ರಹ್ಲಾದನ ಕಥೆಯಲ್ಲಿ ಕಂಬದಿಂದ ನರಸಿಂಹ ಜಿಗಿದು ಬಂದು ಹಿರಣ್ಯಕಶಿಪುವಿನ ಕರುಳು ಕಿತ್ತು
ತಿನ್ನುವುದನ್ನು ದೈವಿಕವೆಂದು ಕಣ್ಣುಮುಚ್ಚಿ ನಂಬುತ್ತಾರೆ. ವೈಷ್ಣವ ಕವಿ ಬರೆದಂತೆ ವಿಷ್ಣು ಗೆದ್ದು
ಹಿರಣ್ಯಕಶಿಪುವಿನ ಶಿವ ಸೋತನೆಂದು ಭಾವಿಸಿ, ಶೈವ-ವೈಷ್ಣವ ಕಲಹಗಳನ್ನು ಸೃಷ್ಟಿಸಿ ಸಮಾಜದ ಶಾಂತಿಗೆ
ಧಕ್ಕೆ ತರುತ್ತಾರೆ. ಆದರೆ ವೈಚಾರಿಕ ಮನೋಧರ್ಮವಿರುವ ಮಗು 'ವಿಷ್ಣುಶಕ್ತಿ, ಶಿವಶಕ್ತಿ ಎರಡೂ ಒಂದೇ
ಅಲ್ಲವೇ? ದೇವರು ಪಕ್ಷಪಾತ ಮಾಡುತ್ತಾನೆಯೇ? ಕಂಬದಿಂದ ನರಸಿಂಹ ಜಿಗಿಯುವುದು ನಿಜವೇ?' ಎಂದು ಪ್ರಶ್ನಿಸಿ,
ಇವು ಕೇವಲ 'ಕಥಾ ಪ್ರತಿಮೆಗಳು' ಎಂದು ನಿರ್ಣಯಿಸುತ್ತದೆ.
ವಿಶ್ವಮಾನವತೆ ಹಾಗೂ
ಸಾರ್ವತ್ರಿಕ ಶಾಂತಿ
ಮಕ್ಕಳಲ್ಲಿ ವೈಚಾರಿಕತೆಯನ್ನು
ಬೆಳೆಸಿದಾಗ ಮತಕಲಹಗಳು, ಮೂಢನಂಬಿಕೆಗಳು ಹಾಗೂ ಹುಸಿ ಮತಾಭಿಮಾನದಿಂದ ಉಂಟಾಗುವ ದ್ವೇಷ ನಿವಾರಣೆಯಾಗುತ್ತದೆ.
ಶ್ರೀರಾಮಕೃಷ್ಣ ಪರಮಹಂಸರು ಬೋಧಿಸಿದ 'ಎಂತು ಮತ ಅಂತು ಪಥ' ಎಂಬ ಸರ್ವಧರ್ಮ ಸಮನ್ವಯದ ಭಾವನೆ ಮೂಡುತ್ತದೆ.
ಇಂದಿನ ವೈಜ್ಞಾನಿಕ ಯುಗದಲ್ಲಿ ಮಕ್ಕಳು ಸಂಕುಚಿತ ಜಾತಿ-ಮತಗಳನ್ನು ತಿರಸ್ಕರಿಸಿ 'ಅನಿಕೇತನ'ರಾಗಿ ವಿಶಾಲ
ಆಧ್ಯಾತ್ಮಿಕ ಹಾಗೂ ಮಾನವೀಯ ಮೌಲ್ಯಗಳ ಅಡಿಗಲ್ಲಿನ ಮೇಲೆ ತಮ್ಮ ಅಭ್ಯುದಯವನ್ನು ನಿರ್ಮಿಸಿಕೊಳ್ಳಬೇಕು
ಎಂಬುದು ಕುವೆಂಪು ಅವರ ಆಶಯವಾಗಿದೆ.
ಪಠ್ಯದ ಅಭ್ಯಾಸ ಪ್ರಶ್ನೆಗಳು ಮತ್ತು ಉತ್ತರಗಳು
ಪ್ರಶ್ನೆ ೧. ಕುವೆಂಪು
ರವರ ಸಂಕ್ಷಿಪ್ತ ಪರಿಚಯ ಬರೆಯಿರಿ.
ಉತ್ತರ: ಕನ್ನಡ ಸಾಹಿತ್ಯದ
ಮಹೋನ್ನತ ಕವಿ, ಯುಗದ ಕವಿ ಕುವೆಂಪು (ಕೆ.ವಿ. ಪುಟ್ಟಪ್ಪ) ಅವರು ಡಿಸೆಂಬರ್ ೨೯, ೧೯೦೪ ರಂದು ಶಿವಮೊಗ್ಗ
ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಜನಿಸಿದರು. ತಂದೆ ವೆಂಕಟಪ್ಪ, ತಾಯಿ ಸೀತಮ್ಮ.
ಇವರ ಪ್ರಮುಖ ಕವನ ಸಂಕಲನಗಳು: 'ಅಮಲನ ಕಥೆ', 'ಬೊಮ್ಮನಹಳ್ಳಿಯ ಕಿಂದರಿಜೋಗಿ', 'ಕೊಳಲು', 'ಪಂಚಜನ್ಯ',
'ಪ್ರೇಮಕಾಶ್ಮೀರ', 'ಪಕ್ಷಿಕಾಶಿ' ಇತ್ಯಾದಿ. 'ಕಾನೂರು ಸುಬ್ಬಮ್ಮ ಹೆಗ್ಗಡಿತಿ' ಮತ್ತು 'ಮಲೆಗಳಲ್ಲಿ
ಮದುಮಗಳು' ಪ್ರಖ್ಯಾತ ಕಾದಂಬರಿಗಳು. 'ಯಮನ ಸೋಲು', 'ಜಲಗಾರ', 'ಶೂದ್ರ ತಪಸ್ವಿ', 'ಬೆರಳೆಗೆ ಕೊರಳ್'
ಅವರ ಪ್ರಮುಖ ನಾಟಕಗಳು. ಕುವೆಂಪು ಅವರು ಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿಯೂ ಸೇವೆ ಸಲ್ಲಿಸಿದರು.
ಇವರ 'ಶ್ರೀ ರಾಮಾಯಣ ದರ್ಶನಂ' ಮಹಾಕಾವ್ಯಕ್ಕೆ ೧೯೬೭ರಲ್ಲಿ ಭಾರತೀಯ ಜ್ಞಾನಪೀಠ ಪ್ರಶಸ್ತಿ ಲಭಿಸಿತು.
ಜೊತೆಗೆ ರಾಷ್ಟ್ರಕವಿ, ನಾಡೋಜ, ಪದ್ಮವಿಭೂಷಣ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಂದ ಇವರು ಗೌರವಿಸಲ್ಪಟ್ಟಿದ್ದಾರೆ.
ಪ್ರಶ್ನೆ ೨. ಎರಡು
ಮೂರು ವರ್ಷದ ಮಕ್ಕಳಲ್ಲಿ ಬದುಕಿನ ಅನುಭವಗಳು ಹೇಗೆ ಅಭಿವ್ಯಕ್ತಗೊಳ್ಳುತ್ತವೆ?
ಉತ್ತರ: ಎರಡು-ಮೂರು
ವರ್ಷಗಳ ಮಗು ತೊದಲು ತೊದಲು ಮಾತನಾಡುತ್ತಾ, ತಿಪ್ಪತಿಪ್ಪ ನಡೆಯುತ್ತಾ ಬದುಕಿನ ಅನುಭವಗಳಿಗೆ ಮೊದಲ
ಹೆಜ್ಜೆ ಇಡುತ್ತದೆ. ಆ ವಯಸ್ಸಿನಲ್ಲಿ ಮೊಳಕೆಯೊಡೆಯುವ ಆಲೋಚನಾ ಶಕ್ತಿಯಿಂದ 'ಅದೇನು? ಇದೇನು? ಅದು
ಎಂಥದ್ದು? ಇದು ಎಂಥದ್ದು?' ಎಂದು ನಿರಂತರವಾಗಿ ಪ್ರಶ್ನೆಗಳನ್ನು ಕೇಳಿ ಹಿರಿಯರಿಂದ ಉತ್ತರ ನಿರೀಕ್ಷಿಸುತ್ತಾ
ತನ್ನ ಬದುಕಿನ ಅನುಭವಗಳನ್ನು ಅಭಿವ್ಯಕ್ತಗೊಳಿಸುತ್ತದೆ.
ಪ್ರಶ್ನೆ ೩. ಕಥಾ
ಕ್ರಮಿಕ ಭಾವನೆಗಳನ್ನು ಲೋಕದಲ್ಲಿಯ ಸತ್ಯವೆಂದು ಭ್ರಮಿಸಿ ನಡೆದರೆ ಏನಾಗುತ್ತದೆ? ವಿವರಿಸಿ.
ಉತ್ತರ: ಕಥೆ ಕೇಳುವಾಗ
ಮಗು ಸ್ವಾರಸ್ಯ ರಕ್ಷಣೆಗಾಗಿ ತನ್ನ ವಿಚಾರಶಕ್ತಿಗೆ ತಾತ್ಕಾಲಿಕ ವಿರಾಮ ನೀಡುತ್ತದೆ. ಆದರೆ ಕಥಾಲೋಕದ
ಭಾವನೆಗಳನ್ನು ಲೌಕಿಕ ಜೀವನದಲ್ಲೂ ಸತ್ಯವೆಂದು ಭ್ರಮಿಸಿ ನಡೆದರೆ ಅಪಾಯ ಕಾದಿರುತ್ತದೆ. ಉದಾಹರಣೆಗೆ,
ಗೋವಿನ ಕಥೆಯಲ್ಲಿ ಸತ್ಯಕ್ಕೆ ಮೆಚ್ಚಿ ಹುಲಿ ಗೋವನ್ನು ತಿನ್ನದೆ ಪ್ರಾಣತ್ಯಾಗ ಮಾಡಿತು ಎಂಬುದನ್ನು
ಲೌಕಿಕ ಲೋಕದಲ್ಲೂ ಅಕ್ಷರಶಃ ನಂಬಿ ನಡೆದರೆ, ನಿಜ ಜೀವನದ ದುಷ್ಟ ವ್ಯಾಘ್ರಗಳು ದುಷ್ಟರಾಗಿಯೇ ಉಳಿದು
ಮನುಷ್ಯ ಅಪಾಯಕ್ಕೆ ಸಿಲುಕುತ್ತಾನೆ. ಆದ್ದರಿಂದ ಕಥಾ ರಂಗದಿಂದ ಲೌಕಿಕ ರಂಗಕ್ಕೆ ಇಳಿದ ಮೇಲೆ ವಿಚಾರಶಕ್ತಿಯನ್ನು
ಎಚ್ಚರದಿಂದ ಬಳಸಬೇಕು, ಇಲ್ಲವಾದರೆ ಬದುಕಿನಲ್ಲಿ ಅನಾಹುತಗಳು ಉಂಟಾಗುತ್ತವೆ.
ಪ್ರಶ್ನೆ ೪. 'ಮತ
ಧರ್ಮ ಪುರಾಣಗಳಿಂದ ಪ್ರಮಾದಗಳು ಹೆಚ್ಚು.' ಕುವೆಂಪುರವರ ಈ ಮಾತನ್ನು ಚರ್ಚಿಸಿ.
ಉತ್ತರ:ಸಂಕುಚಿತ ಮತೀಯ
ಭಾವನೆಗಳು ಹಾಗೂ ಪುರಾಣಗಳ ಅವಿಚಾರಿಕ ಅಂಧ ಸ್ವೀಕಾರವು ಮಾನವ ಸಮಾಜದಲ್ಲಿ ಅನೇಕ ಪ್ರಮಾದಗಳಿಗೆ ಮತ್ತು
ಕಲಹಗಳಿಗೆ ಕಾರಣವಾಗಿದೆ ಎಂಬುದನ್ನು ಕುವೆಂಪು ಅವರು ಈ ಪಾಠದಲ್ಲಿ ಅತ್ಯಂತ ತಾರ್ಕಿಕವಾಗಿ ಚರ್ಚಿಸಿದ್ದಾರೆ.
ಪುರಾಣಗಳ ಅವಿಚಾರಿಕ ಸ್ವೀಕಾರದ ದುರಂತ: ಬಾಲ್ಯದಲ್ಲೇ ಮಕ್ಕಳಿಗೆ ವೈಚಾರಿಕತೆಯನ್ನು ಬೋಧಿಸದಿದ್ದರೆ,
ಅವರು ಪುರಾಣಗಳಲ್ಲಿ ಬರುವ ಘಟನೆಗಳನ್ನು ಅಕ್ಷರಶಃ ಸತ್ಯವೆಂದು ನಂಬಿ ಅಂಧ ವಿಶ್ವಾಸಿಗಳಾಗುತ್ತಾರೆ.
ಉದಾಹರಣೆಗೆ, ಪ್ರಹ್ಲಾದನ ಕಥೆಯಲ್ಲಿ ಬರುವ ನರಸಿಂಹನು ಹಿರಣ್ಯಕಶಿಪುವಿನ ಕರುಳು ಕಿತ್ತು ತಿನ್ನುವುದನ್ನು
ದೈವಿಕ ಘಟನೆ ಎಂದು ಕಣ್ಣುಮುಚ್ಚಿ ನಂಬುತ್ತಾರೆ. ವೈಷ್ಣವ ಕವಿ ಬರೆದಂತೆ ಪ್ರಹ್ಲಾದನ ವಿಷ್ಣು ಗೆದ್ದು
ಹಿರಣ್ಯಕಶಿಪುವಿನ ಶಿವ ಸೋತನೆಂದು ಭಾವಿಸಿ, ಶೈವ-ವೈಷ್ಣವ ಪಂಥಗಳನ್ನು ಕಟ್ಟಿ ದ್ವೇಷ ಸಾಧಿಸುತ್ತಾರೆ.
ಸಮಾಜದ ಮೇಲೆ ಬೀರುವ ದುಷ್ಪರಿಣಾಮ: ಇಂತಹ ಕಥೆಗಳನ್ನು ಪವಿತ್ರವೆಂದು ಶ್ರದ್ಧೆಯಿಂದ ನಂಬುವ ಮಕ್ಕಳು
ಬೆಳೆದು ವೀರ ಮತಭ್ರಾಂತರಾಗುತ್ತಾರೆ. ತಮ್ಮ ಪಂಥವೇ ಶ್ರೇಷ್ಠ, ಇತರರ ಪಂಥ ಕೀಳು ಎಂಬ ಸಣ್ಣತನ ಬೆಳೆಸಿಕೊಂಡು,
ಕೊಲೆ, ರಕ್ತಪಾತ ಹಾಗೂ ನಿರಂತರ ಶಾಂತಿಭಂಗಕ್ಕೆ ಕಾರಣರಾಗುತ್ತಾರೆ. ಧರ್ಮದ ಹೆಸರಿನಲ್ಲಿ ನಡೆಯುವ ಮತಕಲಹಗಳು,
ಮೂಢನಂಬಿಕೆಗಳು ಮತ್ತು ಹುಸಿ ಮತಾಭಿಮಾನವು ಮಾನವೀಯತೆಯನ್ನು ವಿನಾಶದತ್ತ ತಳ್ಳುತ್ತವೆ.
ವಿಚಾರಶಕ್ತಿಯ ಮಹತ್ವ: ಕುವೆಂಪು ಅವರ ಪ್ರಕಾರ, ಮತ-ಧರ್ಮಗಳು ಬುದ್ಧಿಯ ಒರಗೆಲ್ಲಿಗೆ ಒಳಪಡಬೇಕು. ಪುರಾಣಗಳ
ಕಥೆಗಳು ಕೇವಲ ಸತ್ಯವನ್ನು ಸೂಚಿಸುವ 'ಕಥಾ ಪ್ರತಿಮೆಗಳು' (Mythological metaphors) ಮಾತ್ರವೇ
ಹೊರತು, ನಡೆದುಹೋದ ಐತಿಹಾಸಿಕ ಘಟನೆಗಳಲ್ಲ ಎಂಬ ಸತ್ಯವನ್ನು ಗ್ರಹಿಸಬೇಕು.
ಬಾಲ್ಯದಲ್ಲೇ ವೈಚಾರಿಕ ಮನೋಧರ್ಮವನ್ನು ಬಿತ್ತಿದಾಗ
ಮಾತ್ರ ಮತಗಳ ಕುರುಡು ಆಚರಣೆಗಳಿಂದ ಸಮಾಜವನ್ನು ಮುಕ್ತಿಗೊಳಿಸಬಹುದು. 'ಎಂತು ಮತ ಅಂತು ಪಥ' ಎಂಬ ಜ್ಞಾನದಿಂದ
ಎಲ್ಲ ಮತಗಳನ್ನೂ ಮತಿಯ ಒರಗೆಲ್ಲಿಗೆ ತಿದ್ಧಿ, ಮಾನವಕುಲವು ಸಂಕುಚಿತ ಭೇದಗಳನ್ನು ತೊರೆದು ವಿಶ್ವಮಾನವತೆಯತ್ತ
ಸಾಗಲು ಸಾಧ್ಯವಾಗುತ್ತದೆ.
ಪ್ರಶ್ನೆ ೫. ವೈಚಾರಿಕ
ಮನೋಧರ್ಮದ ಅವಶ್ಯಕತೆ ಇದೆಯೇ? ಒಂದು ಕಥೆಯ ಮೂಲಕ ವಿವರಿಸಿ.
ಉತ್ತರ: ವೈಚಾರಿಕ
ಮನೋಧರ್ಮವೆಂದರೆ ಪ್ರತಿಯೊಂದು ವಿಚಾರವನ್ನು ಪ್ರಶ್ನಿಸುವ, ಸಂದೇಹ ಪಡುವ, ಸತ್ಯಾಸತ್ಯತೆಗಳನ್ನು ಒರಗೆಲ್ಲಿಗೆ
ತಿದ್ದಿ ಪರೀಕ್ಷಿಸುವ ಪ್ರಜ್ಞೆಯಾಗಿದೆ. ಸಮಾಜದ ಶಾಂತಿ, ಮೌಢ್ಯ ನಿವಾರಣೆ ಹಾಗೂ ನಿಜವಾದ ಮಾನವೀಯ ಮೌಲ್ಯಗಳ
ಸ್ಥಾಪನೆಗೆ ಇದು ಅತ್ಯಗತ್ಯ.
ಪ್ರಹ್ಲಾದನ ಕಥೆಯ ವಿಶ್ಲೇಷಣೆ: ಕುವೆಂಪು ಅವರು ಪ್ರಹ್ಲಾದನ ಪುರಾಣ ಕಥೆಯ ಮೂಲಕ ವೈಚಾರಿಕತೆಯ ಅವಶ್ಯಕತೆಯನ್ನು
ಸೊಗಸಾಗಿ ವಿವರಿಸಿದ್ದಾರೆ. ಪ್ರಹ್ಲಾದನ ಕಥೆಯಲ್ಲಿ ಹಿರಣ್ಯಕಶಿಪು ಕಂಬವನ್ನು ಒದೆದಾಗ ನರಸಿಂಹನು ಜಿಗಿದು
ಹೊರಬಂದು ಹಿರಣ್ಯಕಶಿಪುವಿನ ಕರುಳು ಕಿತ್ತು ತಿನ್ನುತ್ತಾನೆ. ಈ ಸಂದರ್ಭದಲ್ಲಿ ಹಿರಣ್ಯಕಶಿಪುವಿಗೆ
ವರ ನೀಡಿದ್ದ ಶಿವನು ಅವನನ್ನು ರಕ್ಷಿಸಲು ಬರುವುದೇ ಇಲ್ಲ. ವೈಷ್ಣವ ಕವಿ ತನ್ನ ಇಷ್ಟದಂತೆ ವಿಷ್ಣುವನ್ನು
ವಿಜಯಿ ಎಂದು ಚಿತ್ರಿಸಿದ್ದಾನೆ.
ವೈಚಾರಿಕತೆಯ ಕೊರತೆಯ ಪರಿಣಾಮ: ವೈಚಾರಿಕತೆ ಇಲ್ಲದ ಮಗು ಈ ಕಥೆಯನ್ನು ಅಕ್ಷರಶಃ ಸತ್ಯವೆಂದು ನಂಬಿ,
ವೈಷ್ಣವ ಪಂಥಕ್ಕೆ ಬಿದ್ದು, ಶೈವ-ವೈಷ್ಣವರ ನಡುವೆ ವೈರತ್ವವನ್ನು ಬೆಳೆಸಿಕೊಳ್ಳುತ್ತದೆ. ಇದರಿಂದ ಮತಾಭಿಮಾನ
ಬೆಳೆದು ಸಮಾಜದಲ್ಲಿ ಕೊಲೆ, ರಕ್ತಪಾತ ಮತ್ತು ಶಾಂತಿಭಂಗ ಉಂಟಾಗುತ್ತದೆ.
ವೈಚಾರಿಕ ಮನೋಧರ್ಮದ ಪಾತ್ರ: ಅದೇ ಮಗುವಿನಲ್ಲಿ ಚಿಕ್ಕಂದಿನಿಂದಲೇ ವೈಚಾರಿಕ ಮನೋಧರ್ಮವನ್ನು ಬಿತ್ತಿದ್ದರೆ,
ಆ ಮಗು ಕಥೆಯನ್ನು ಕಣ್ಣುಮುಚ್ಚಿ ನುಂಗುತ್ತಿರಲಿಲ್ಲ. ಬದಲಾಗಿ 'ಪ್ರಹ್ಲಾದನ ವಿಷ್ಣು ಶಕ್ತಿ, ಹಿರಣ್ಯಕಶಿಪುವಿನ
ಶಿವ ಶಕ್ತಿ ಎರಡೂ ದೈವಿಕ ಶಕ್ತಿಗಳಲ್ಲವೇ? ದೇವರು ಪಕ್ಷಪಾತ ಮಾಡುತ್ತಾನೆಯೇ? ಕಂಬದಿಂದ ನರಸಿಂಹ ಜಿಗಿಯುವುದು
ನಿಜವೇ?' ಎಂದು ಪ್ರಶ್ನೆಗಳ ಸುರಿಮಳೆ ಗೈಯ್ಯುತ್ತಿತ್ತು. ಈ ಪುರಾಣಗಳು ಕೇವಲ ಸತ್ಯವನ್ನು ಸೂಚಿಸುವ
'ಕಥಾ ಪ್ರತಿಮೆಗಳು' ಎಂದು ನಿರ್ಣಯಿಸುತ್ತಿತ್ತು.ಈ ಕಥೆಯು ಸ್ಪಷ್ಟಪಡಿಸುವಂತೆ, ಸಮಾಜವನ್ನು ಸಂಕುಚಿತ
ಮತದ್ವೇಷಗಳಿಂದ ರಕ್ಷಿಸಲು ಹಾಗೂ ಸತ್ಯ ಮತ್ತು ಅಸತ್ಯಗಳನ್ನು ಬೇರ್ಪಡಿಸಿ ನೋಡಲು ಪ್ರತಿಯೊಬ್ಬ ಮಗುವಿಗೂ
ಬಾಲ್ಯದಿಂದಲೇ ವೈಚಾರಿಕ ಮನೋಧರ್ಮದ ಶಿಕ್ಷಣವನ್ನು ನೀಡುವುದು ಅತ್ಯಂತ ಅವಶ್ಯಕವಾಗಿದೆ.
ಪ್ರಶ್ನೆ ೬. 'ಎಂತು
ಮತ ಅಂತು ಪಥ' ಮಾತಿನ ಸ್ವಾರಸ್ಯ ತಿಳಿಸಿ.
ಉತ್ತರ: 'ಎಂತು ಮತ
ಅಂತು ಪಥ' ಎಂಬುದು ಶ್ರೀರಾಮಕೃಷ್ಣ ಪರಮಹಂಸರು ಬೋಧಿಸಿದ ಸಾರ್ವತ್ರಿಕ ಸತ್ಯವಾಗಿದೆ. ಜಗತ್ತಿನಲ್ಲಿ
ಎಷ್ಟು ಮತಗಳಿವೆಯೋ ಅಷ್ಟೂ ಮಾರ್ಗಗಳು ದೈವಿಕ ಸತ್ಯವನ್ನು ತಲುಪಲು ಸಾಧನಗಳಾಗಿವೆ ಎಂಬುದು ಇದರ ಸ್ವಾರಸ್ಯ.
ಈ ಧರ್ಮ ಸಮನ್ವಯದ ಭಾವನೆಯಿಂದ ಮತಕಲಹಗಳು ಹಾಗೂ ಮೂಢನಂಬಿಕೆಗಳು ನಿವಾರಣೆಯಾಗಿ ಜಗತ್ತು ಶಾಂತಿಮಂದಿರವಾಗುತ್ತದೆ.
ಪ್ರಶ್ನೆ ೭. ಪ್ರಹ್ಲಾದನ
ಕಥೆಯ ಸ್ವಾರಸ್ಯ ಬರೆಯಿರಿ.
ಉತ್ತರ: ಪ್ರಹ್ಲಾದನ
ಕಥೆಯಲ್ಲಿ ಹಿರಣ್ಯಕಶಿಪು ಕಂಬಕ್ಕೆ ಒದೆದಾಗ ನರಸಿಂಹ ಹೊರಬಂದು ಅವನ ಕರುಳನ್ನು ಕಿತ್ತು ತಿನ್ನುತ್ತಾನೆ.
ವಿಷ್ಣುವಿನ ಪರವಾಗಿದ್ದ ಕವಿ ಬರೆದ ಈ ಕಥೆಯನ್ನು ವೈಚಾರಿಕತೆಯಿಲ್ಲದೆ ಅಕ್ಷರಶಃ ನಂಬಿದರೆ ಶೈವ-ವೈಷ್ಣವ
ಕಲಹಗಳು ಹುಟ್ಟಿಕೊಳ್ಳುತ್ತವೆ. ಆದರೆ ವೈಚಾರಿಕತೆಯಿಂದ ನೋಡಿದಾಗ, ಇದು ದೇವರ ಪಕ್ಷಪಾತವನ್ನಾಗಲಿ ಅಥವಾ
ಹಿರಣ್ಯಕಶಿಪುವಿನ ಶಿವಶಕ್ತಿಯ ಸೋಲನ್ನಾಗಲಿ ಸೂಚಿಸುವುದಿಲ್ಲ. ಬದಲಾಗಿ, ಇದು ಅಧರ್ಮದ ವಿರುದ್ಧ ಧರ್ಮದ
ವಿಜಯವನ್ನು ಸಂಕೇತಿಸುವ ಒಂದು 'ಕಥಾ ಪ್ರತಿಮೆ' (Mythological metaphor) ಎಂಬುದು ಈ ಕಥೆಯ ನೈಜ
ಸ್ವಾರಸ್ಯವಾಗಿದೆ.
ಪ್ರಶ್ನೆ ೮. ಮಕ್ಕಳಿಗೆ
ವೈಚಾರಿಕತೆಯ ಅವಶ್ಯಕತೆ ಇದೆಯೇ? ಚರ್ಚಿಸಿ.
ಉತ್ತರ: ಇಂದಿನ ಜಟಿಲ,
ವೈಜ್ಞಾನಿಕ ನಾಗರಿಕ ಜೀವನಕ್ಕೆ ಹೊಂದಿಕೊಳ್ಳಲು ಮಕ್ಕಳ ಭಾವಜೀವನ ಹಾಗೂ ಮನೋಧರ್ಮವು ಅತ್ಯಂತ ವೈಚಾರಿಕವಾಗಿರಬೇಕಾದುದು
ಇಂದಿನ ಸಮಾಜದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.
ಬಾಲ್ಯದಲ್ಲಿ ವೈಚಾರಿಕತೆಯ ವಿಕಾಸ: ಎರಡು-ಮೂರು ವರ್ಷದ ಮಗು 'ಅದೇನು? ಇದೇನು?' ಎಂದು ಪ್ರಶ್ನಿಸುವ
ಮೂಲಕವೇ ತನ್ನ ಆಲೋಚನಾ ಶಕ್ತಿಯನ್ನು ಪ್ರದರ್ಶಿಸುತ್ತದೆ. ದೊಡ್ಡವರು ಒಂದೇ ಪ್ರಶ್ನೆಗೆ ಬೇರೆ ಬೇರೆ
ಉತ್ತರ ನೀಡಿದಾಗ ಮಗುವಿನಲ್ಲಿ ಸ್ವಂತ 'ವಿಚಾರಬುದ್ಧಿ' ಜಾಗೃತಗೊಳ್ಳುತ್ತದೆ. ಕಥೆ ಕೇಳುವಾಗ ಆನಂದಕ್ಕಾಗಿ
'ವಿಚಾರ ವಿರಾಮ' ತಳೆದರೂ, ಲೌಕಿಕ ಪ್ರಪಂಚಕ್ಕೆ ಬಂದಾಗ ಸರಿ-ತಪ್ಪುಗಳನ್ನು ವಿವೇಚಿಸುವ ಎಚ್ಚರ ಇರಬೇಕಾಗುತ್ತದೆ.
ಸಂಕುಚಿತತೆಯ ನಿವಾರಣೆ: ಮಕ್ಕಳಿಗೆ ಬಾಲ್ಯದಿಂದಲೇ ವೈಚಾರಿಕ ಪ್ರಜ್ಞೆಯನ್ನು ಕಲಿಸದಿದ್ದರೆ, ಅವರು
ಮೌಢ್ಯಗಳು, ಪುರಾಣಗಳ ಅವಿಚಾರಿತ ನಂಬಿಕೆಗಳು ಹಾಗೂ ಸಂಕುಚಿತ ಜಾತಿ-ಮತಗಳ ವ್ಯಾಮೋಹಕ್ಕೆ ಬಲಿಯಾಗುತ್ತಾರೆ.
ತಮ್ಮ ಧರ್ಮವೇ ಶ್ರೇಷ್ಠವೆಂಬ ಅಂಧಾಭಿಮಾನದಿಂದ ಇತರ ಧರ್ಮಗಳನ್ನು ದ್ವೇಷಿಸಿ ಸಮಾಜದ ಅಶಾಂತಿಗೆ ಕಾರಣರಾಗುತ್ತಾರೆ.
ವೈಚಾರಿಕತೆಯು ಮಗುವಿಗೆ ಪ್ರಶ್ನಿಸುವ, ಸಂದೇಹ ಪಡುವ ಮತ್ತು ಸತ್ಯವನ್ನು ಒರಗೆಲ್ಲಿಗೆ ತಿದ್ದಿ ಪರೀಕ್ಷಿಸುವ
ಶಕ್ತಿಯನ್ನು ನೀಡುತ್ತದೆ.
ವಿಶ್ವಮಾನವ ದೃಷ್ಟಿ ಮತ್ತು ಸಮ ಸಮಾಜ: ಮಕ್ಕಳಲ್ಲಿ ವೈಚಾರಿಕತೆಯನ್ನು ಬಿತ್ತಿದಾಗ ಅವರು ಧರ್ಮ, ಜಾತಿ,
ಮತಗಳ ಭೇದವಿಲ್ಲದೆ 'ಅನಿಕೇತನ'ರಾಗಿ ಬೆಳೆಯುತ್ತಾರೆ. ಶ್ರೀರಾಮಕೃಷ್ಣರ 'ಎಂತು ಮತ ಅಂತು ಪಥ' ಎಂಬ
ಸರ್ವಧರ್ಮ ಸಮನ್ವಯ ತತ್ವವನ್ನು ಗ್ರಹಿಸಿ ವಿಶಾಲ ಆಧ್ಯಾತ್ಮಿಕ ವಿಚಾರಗಳತ್ತ ಸಾಗುತ್ತಾರೆ.
ಉಪಸಂಹಾರ: ವೈಚಾರಿಕತೆಯು ಸಮ ಸಮಾಜ ನಿರ್ಮಾಣಕ್ಕೆ ಬುನಾದಿಯಾಗಿದೆ. ಇಂದಿನ ಮಕ್ಕಳು ವೈಜ್ಞಾನಿಕ ಹಾಗೂ
ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ವಿಶ್ವಮಾನವರಾಗಿ ಬಾಳಲು ಅವರಿಗೆ ಬಾಲ್ಯದಲ್ಲೇ ವೈಚಾರಿಕತೆಯ
ಶಿಕ್ಷಣವನ್ನು ನೀಡುವುದು ಅತ್ಯಂತ ಅಗತ್ಯವಾಗಿದೆ.
