'ಊರಿಗೆ ಹೋಗದೆ ಎಷ್ಟೊಂದು ದಿನಗಳಾದವಲ್ಲ. ಇಷ್ಟು ದಿನ ಆಫೀಸು ಕೆಲಸ ಅಂತ ಹಗಲು ರಾತ್ರಿ ದುಡಿದದ್ದಕ್ಕೆ ಸಾವುಕಾರರು ನಿಮಗಿಂತ ನಾಲ್ಕು ವರ್ಷ ಕೆಳಗಿದ್ದವರನ್ನು ಮೇಲೆ ತಂದು ಕೂರಿಸಿ ಮರ್ಯಾದೆ ಮಾಡಿದ್ದಾರಲ್ಲ. ಇನ್ನಾದರೂ ಮನೆ ಕಡೆ ಗಮನ ಕೊಡಿ. ಈಗೇನು ಮಕ್ಕಳು ತಮ್ಮ ಕಾಲಮೇಲೆ ನಿಲ್ಲುವಂತಾಗಿದ್ದಾರೆ. 'ಊರು ಕಡೆ ಹೋಗಿ ಗದ್ದೆ ತೋಟ ನೋಡಿ ಬರೋಣ' ಎಂದು ಹೊನ್ನಮ್ಮ ಹೇಳಿದಾಗ ಅದಕ್ಕೆ ಪ್ರತಿಯಾಗಿ ವಾದ ಮಾಡಲು ಶಂಕರನಲ್ಲಿ ಯಾವ ನೆಪಗಳೂ ಇರಲಿಲ್ಲ.
'ಈಚೆಗಷ್ಟೆ ಅವನ ಕಚೇರಿಯಲ್ಲಿ ದೊಡ್ಡ ಬದಲಾವಣೆಯಾಗಿತ್ತು. ಅವನಿದ್ದುದು ಖಾಸಗಿ ಸಂಸ್ಥೆ, ರಾಜ್ಯದ ಹಲವೆಡೆ ಅದರ ಪ್ರಾದೇಶಿಕ ಕಚೇರಿಗಳಿದ್ದರೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಇವನ ವಿಭಾಗದ ಮುಖ್ಯಸ್ಥನ ಹುದ್ದೆ ತೆರವಾಗಿತ್ತು. ಇವನಂತೆ ಒಂದೇ ಸೇವಾ ಅವಧಿಯ ಹಲವರಿದ್ದರೂ ರಾಜ್ಯದ ಎಲ್ಲ ಪ್ರಾದೇಶಿಕ ಕಚೇರಿಗಳಲ್ಲಿ ಕೆಲಸ ಮಾಡಿ ಹೆಸರು ಗಳಿಸಿದ್ದ ಅನುಭವದ ಆಧಾರದ ಮೇಲೆ ಬೆಂಗಳೂರು ಕೇಂದ್ರ ಕಚೇರಿಯ ವಿಭಾಗ ಮುಖ್ಯಸ್ಥನ ಹುದ್ದೆ ಶಂಕರನೂ ಸೇರಿದಂತೆ ಕೆಲವು ಹಿರಿಯರಲ್ಲಿ ಯಾರಾದರೊಬ್ಬರಿಗೆ ಸಿಗುತ್ತದೆಯೆಂದೇ ಕಚೇರಿಯ ಹೆಚ್ಚಿನ ಸಿಬ್ಬಂದಿ ಭಾವಿಸಿದ್ದರು. ಆದರೆ ಅವರಿಗಿಂತ ನಾಲೈದು ವರ್ಷ ಕಿರಿಯನಾಗಿದ್ದ ಅಧಿಕಾರಿಗೆ ಅನಿರೀಕ್ಷಿತವಾಗಿ ಬಡ್ತಿ ನೀಡಿದ್ದರಿಂದ ಶಂಕರನೂ ಸೇರಿದಂತೆ ಹೆಚ್ಚಿನ ಹಿರಿಯ ಅಧಿಕಾರಿಗಳು ಅಸಮಧಾನಗೊಂಡಿದ್ದರು. ಕಛೇರಿಯ ಯಾವತ್ತೂ ಕೆಲಸಗಳನ್ನು ಹೊತ್ತುಗೊತ್ತಿನ ಪರಿವೆ ಇಲ್ಲದೆ ನಿರ್ವಹಿಸುತ್ತ ಇದ್ದುದಕ್ಕೆ ಸಾವುಕಾರರು ನೀಡಿದ ಈ ಬಗೆಯ ಮರ್ಯಾದೆ ಅವರ ಅಂತರಂಗವನ್ನೇ ಅಲ್ಲಾಡಿಸಿಬಿಟ್ಟಿತ್ತು.
ಎರಡು ಮೂರು ದಿನ ಒಳಗೊಳಗೆ ನರಳಿದ ಶಂಕರನಿಗೆ ತಕ್ಷಣಕ್ಕೆ ರಾಜೀನಾಮೆ ಕೊಟ್ಟು ನಿರ್ಗಮಿಸಿಬಿಡಲೇ ಎನ್ನಿಸಿತ್ತು. 'ಕೆಲಸ ಬಿಟ್ಟು ಏನು ಮಾಡುತ್ತೀರಿ. ಮಕ್ಕಳೇನೋ ತಮ್ಮ ಕಾಲಮೇಲೆ ನಿಂತಿದ್ದಾರೆ. ಆದರೆ ಅವರನ್ನು ಅವಲಂಬಿಸಿ ಇರಲಾಗುತ್ತದೆಯೇ? ಸೇವೆಯ ಅವಕಾಶ ಇರುವಷ್ಟು ದಿನ ಕೆಲಸ ಮಾಡಿ. ನಿಮಗೆ ಕೆಲಸ ಮಾಡಿದರೆ ಬಡ್ತಿ ಕೊಡುತ್ತೇವೆ ಅಂತ ಸಾವುಕಾರರು ಬರೆದುಕೊಟ್ಟಿದ್ದಾರಾ? ಸರ್ಕಾರಿ ಇಲಾಖೆಯಾದರೆ ಕೋರ್ಟು ಕಚೇರಿ ಅಂತ ಇರುತ್ತದೆ. ನಿಮಲ್ಲಿ ಸಾವುಕಾರರೇ ಕೋರ್ಟು- ಕಚೇರಿ. ಕೆಲಸ ಮಾಡಿದ್ದಕ್ಕೆ ಸಂಬಳ ಕೊಡುತ್ತಾರಲ್ಲ. ಅದಕ್ಕೆ ರಾಜೀನಾಮೆ ಕೊಡುವ ಮಾತೇಕೆ?' ಎಂದು ಹೊನ್ನಮ್ಮನೇ ಧೈರ್ಯ ತುಂಬಿದ್ದಳು. ಆದರೂ ಕಚೇರಿಗೆ ಬಂದಾಗಲೆಲ್ಲ ಅವನಿಗೆ ತನ್ನ ನಿಷ್ಕಪಟ ಸೇವೆಯನ್ನು ಸಾವುಕಾರರು ಗಮನಿಸಲಿಲ್ಲವಲ್ಲ ಎಂಬ ಕೊರಗು ಬಾಧಿಸುತ್ತಿತ್ತು. ಆದರೆ ತನ್ನಂತೆಯೇ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಇತರ ಹಿರಿಯ ಸಹೋದ್ಯೋಗಿಗಳನ್ನು
ನೋಡಿದಾಗ ಈ ಸಂಕಷ್ಟದಲ್ಲಿ ತಾನೊಬ್ಬನೇ ಇಲ್ಲ ಎಂಬ ಸಮಾಧಾನವಾಗುತ್ತಿತ್ತು. ಸ್ವಲ್ಪ ದಿನ ರಜೆ ಹಾಕಿ ಹೋದರೆ ಮನಸ್ಸಿಗೆ ಸಮಾಧಾನವಾಗಬಹುದೆಂದು ಅವನು ಯೋಚಿಸುತ್ತಿದ್ದಾಗ ಹೊನ್ನಮ್ಮ ಊರಿಗೆ ಹೋಗುವ ಪ್ರಸ್ತಾಪ ಇಟ್ಟಿದ್ದು ಅವನಿಗೆ ನಿರಾಳತೆಯ ಭಾವ ತಂದಿತು. 'ಆಗಲಿ ಹೋಗಿ ಬರೋಣ' ಎಂದು ಸಮ್ಮತಿಸಿದ. ಹೊರಡುವ ದಿನ ತಿಳಿಸಿ ಶಿವಮೂರ್ತಿಗೆ ಕಾಗದ ಕೂಡ ಹಾಕಿದ್ದ.
ಹೊನ್ನಮ್ಮ ಮದುವೆಯಾದ ಮೊದಲ ವರ್ಷ ಊರಲ್ಲಿನ ಪ್ರತಿ ಹಬ್ಬವನ್ನೂ ನೋಡಿ ರೋಮಾಂಚನಗೊಂಡಿದ್ದಳು. ತುಮಕೂರಿನಲ್ಲಿ ಬಾಲ್ಯ ಕಳೆದು ಪದವಿವರೆಗೆ ಓದಿ, ಸ್ನಾತಕೋತ್ತರ ಶಿಕ್ಷಣಕ್ಕೆ ಬೆಂಗಳೂರು ಸೇರಿದವಳು ಅಲ್ಲಿ ಭೇಟಿಯಾದ ಮಲೆನಾಡಿನ ಹುಡುಗ ಶಂಕರನ ಕ್ರಿಯಾಶೀಲತೆಗೆ ಬೆರಗಾಗಿ ಬೇರೆ ಸಮುದಾಯದ ಅಪರಿಚಿತ ವಲಯಕ್ಕೆ ಸೇರಿಕೊಂಡಿದ್ದಳು. ಅಂಥ ಪ್ರಸಂಗಗಳಲ್ಲಿ ಉದ್ಭವಿಸುವ ಆರಂಭದ ಎಡರು ತೊಡರುಗಳು ಹೇಗೋ ನಿವಾರಣೆಯಾಗಿ ಎರಡೂ ಕಡೆ ಹೋಗಿ ಬರುವ ಶಾಂತ ಪರಿಸ್ಥಿತಿ ಏರ್ಪಟ್ಟ ಮೇಲೆ ಅದೇ ಮೊದಲ ಬಾರಿಗೆ ಶಂಕರನೊಂದಿಗೆ ಶಿವಮೊಗ್ಗದ ರೈಲು ಹತ್ತಿದ್ದಳು. ಬೆಳಗಿನ ಜಾವಕ್ಕೆ ಶಿವಮೊಗ್ಗ ಸೇರಿದಾಗ ಅಲ್ಲಿಂದ ಖಾಸಗಿ ಬಸ್ ನಿಲ್ದಾಣಕ್ಕೆ ನಡೆಸಿಕೊಂಡೇ ಕರೆದೊಯ್ದಿದ್ದ ಶಂಕರ. ರೈಲು ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ ನಡೆಸಿಕೊಂಡು ಬಂದ್ದಿದ ಅವನ ಮೇಲೆ ಬಂದಿದ್ದ ಕೋಪವೆಲ್ಲ ಊರು ಕಡೆ ಬಸ್ಸಿನಲ್ಲಿ ತೆರಳುತ್ತಿದ್ದಾಗ ರಸ್ತೆಯ ಎರಡೂ ಕಡೆ ವ್ಯಾಪಿಸಿದ್ದ ದಟ್ಟ ಕಾಡನ್ನು ನೋಡುತ್ತಿದ್ದಂತೆ ಮರೆಯಾಗಿ ಉಲ್ಲಾಸ ಮೂಡಿತ್ತು. ಪ್ರತಿ ಸಲ ಹೋಗುವಾಗಲೂ ಅಂಥ ಉಲ್ಲಾಸ ಮೂಡಿಸುತ್ತಿದ್ದ ಮಲೆನಾಡಿನ ಪ್ರಯಾಣ ಅವಳಿಗೆ ನಂತರದ ವರ್ಷಗಳಲ್ಲಿಯೂ ಬೇಸರ ತಂದಿರಲಿಲ್ಲ. ಪುರುಸೊತ್ತು ಸಿಕ್ಕಿದಾಗಲೆಲ್ಲ ಊರು ಕಡೆ ಹೋಗಿ ಬರಲು ಅವಳು ವರಾತ ಹಚ್ಚುತ್ತಲೇ ಇದ್ದಳು.
ಆರಂಭದ ವರ್ಷಗಳಲ್ಲಿ ಶಂಕರನಿಗೆ ಒಳ್ಳೆಯ ನೌಕರಿ ಚಿಂತೆ ಇದ್ದರೆ, ನಂತರದ ವರ್ಷಗಳಲ್ಲಿ ರಾಜ್ಯದ ವಿವಿಧ ಕಡೆ ವರ್ಗವಾಗಿ ಅಲ್ಲೆಲ್ಲ ಸಂಸಾರ ಮೇಲೆ ಮೋಹ ನೆಲೆಗೊಳಿಸುವ ಪ್ರಯತ್ನ ನಡೆಯುತ್ತಿತ್ತು. ಹುಟ್ಟೂರಿನ ಉಳಿಸಿಕೊಂಡಿದ್ದ ಶಂಕರ ವರ್ಷಕ್ಕೊಮ್ಮೆ ಒಂದಲ್ಲ ಒಂದು ನೆಪ ಇಟ್ಟುಕೊಂಡು ಸಂಸಾರ ಸಹಿತ ಹೋಗಿ ಬರುತ್ತಿದ್ದ. ಎರಡು ಮೂರು ದಿನದ ಅಂಥ ಭೇಟಿ ಹೊನ್ನಮ್ಮನಿಗೆ ಯಾವತ್ತೂ ಶ್ರಮ ಎನಿಸಿರಲಿಲ್ಲ. ಮಧ್ಯೆ ಕೆಲವು ವರ್ಷ ಹುಬ್ಬಳ್ಳಿಯಂಥ ಊರುಗಳಲ್ಲಿನ ವಾಸ. ಮಕ್ಕಳ ಪರೀಕ್ಷೆ, ಶಂಕರನ ವರ್ಗಾವಣೆಯಂಥ ಅನಿವಾರ್ಯ ಸಂದರ್ಭಗಳಲ್ಲಿ ಊರಿನ ವಾರ್ಷಿಕ ಭೇಟಿ ಅನಿರ್ದಿಷ್ಟವಾಗಿರುತ್ತಿತ್ತು. ಬೆಂಗಳೂರಿಗೆ ವರ್ಗವಾಗಿ ಬಂದ ಮೇಲೆ ಹಬ್ಬಗಳಿಗೆ ಒಂದು ದಿನ ರಜೆ ಸಿಕ್ಕಿದರೆ ಊರಿಗೆ ಹೋಗಿ ಬರಲು ಸಾಕಾಗುತ್ತಿರಲಿಲ್ಲ. ಬೆಳಿಗ್ಗೆ ಹೊರಟರೆ ಮಧ್ಯಾಹ್ನದ ವೇಳೆಗೆ ಶಿವಮೊಗ್ಗ ಸೇರಿ ಅಲ್ಲಿಂದ ಇನ್ನೊಂದು ಬಸ್ಸು ಹಿಡಿದು ಊರು ಸೇರುವಷ್ಟರಲ್ಲಿ ಸಂಜೆಯಾಗಿ ಇಡೀ ದಿನವೇ ಪ್ರಯಾಣದ ಲೆಕ್ಕದಲ್ಲಿ ಖರ್ಚಾಗಿ ಬಿಡುತ್ತಿತ್ತು. ಬೆಂಗಳೂರಿನಲ್ಲಿ ದೂರದ ಬಡಾವಣೆಯಲ್ಲಿದ್ದ ಅವನು ಬಸ್ ನಿಲ್ದಾಣಕ್ಕೆ ಬರುವಷ್ಟರಲ್ಲಿ ಬೆಳಗಿನ ವೇಗದ
ಬಸ್ಸುಗಳು ಹೋಗಿರುತ್ತಿದ್ದವು. ರೈಲಿನಲ್ಲಿ ಹೋಗುವುದು ಸುಖಕರ ಎನಿಸಿತ್ತಾದರೂ ಅದಕ್ಕೆ ಇನ್ನೂ ಮೊದಲೇ ಮನೆ ಬಿಡಬೇಕಾಗುತ್ತಿತ್ತು. ಇದನ್ನೆಲ್ಲ ಲೆಕ್ಕಕ್ಕೆ ತೆಗೆದುಕೊಂಡು ಈಚಿನ ವರ್ಷಗಳಲ್ಲಿ ಅವನು ಬಾಡಿಗೆ ಕಾರಿನಲ್ಲಿ ಊರಿಗೆ ಹೋಗಿ ಬರುವ ಪರಿಪಾಠ ಇರಿಸಿಕೊಂಡಿದ್ದ. ಮಕ್ಕಳಿಬ್ಬರು ಉದ್ಯೋಗ ನಿಮಿತ್ತ ಹೊರಗಡೆ ಇದ್ದ ಕಾರಣ 'ಈ ಸಲ ಕಾರಿನಲ್ಲಿಯೇ ಹೋಗಿ ಬರೋಣ. ಕಾರು ಕೊಂಡ ಮೇಲೆ ಹೆಚ್ಚು ದೂರ ಹೋಗಿಯೇ ಇಲ್ಲ' ಎಂದು ಹೊನ್ನಮ್ಮನನ್ನು ಒಪ್ಪಿಸಿದ್ದ.
ಕಾಡು ಮೇಡಿನ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ ಹೊನ್ನಮ್ಮ ಆರಂಭದಲ್ಲಿ ನಿಮ್ಮೂರು ಅನ್ನುತ್ತಿದ್ದವಳು ಗಂಡು ಮಕ್ಕಳಿಬ್ಬರು ಹೈಸ್ಕೂಲು ಹಂತಕ್ಕೆ ಬರುವಷ್ಟರಲ್ಲಿ ನಮ್ಮೂರು ಎನ್ನತೊಡಗಿದ್ದಳು. ಶಂಕರ ತಂದು ಹಾಕುವುದರಲ್ಲಿಯೇ ಸಂಸಾರವನ್ನು ಅಚ್ಚು ಕಟ್ಟಾಗಿ ನಡೆಸುತ್ತ ಊರು ಕಡೆಯವರನ್ನು ಭಾವಿಸುತ್ತಿದ್ದ ಹೊನ್ನಮ್ಮ ಶಂಕರನ ಸಂಬಂಧಿಕಲ್ಲಿಯೂ ಸ್ವಂತದವಳಾಗಿದ್ದಳು. ಊರಿಗೆ ಬಂದಾಗ ಸ್ವಲ್ಪ ಹೊತ್ತಿಗೆಲ್ಲ ಅಡುಗೆ ಮನೆ ಪ್ರವೇಶಿಸಿ ಅಡುಗೆ ಕೆಲಸಗಳಲ್ಲಿ ಕೈ ಹಾಕುತ್ತಿದ್ದಳು. ಪರಕೀಯ ಸಮುದಾಯದಿಂದ ಬಂದ ಕಲಿತ ಹೆಣ್ಣೂಬ್ಬಳು ಮನೆಯ ಅಡುಗೆ ಮನೆಯಲ್ಲಿ ನಿಂತು ಕೆಲಸ ಮಾಡುತ್ತಿರುವ ರೀತಿಯೇ ಮನೆಯವರಲ್ಲಿ ಬೆರಗು ಮೂಡಿಸುತ್ತಿತ್ತು. ಕೆಲವು ಹಬ್ಬಗಳಲ್ಲಿ ಚಂದ್ರಮ್ಮನೂ ಜತೆಗೂಡುತ್ತಿದ್ದಳು. ಜಯಪ್ಪನ ಸಂಸಾರ ಬಂದ ಹೊತ್ತಿನಲ್ಲೇ ಶಂಕರನ ಸಂಸಾರವೂ ಬಂದು ಎರಡು ಮೂರು ದಿನ ಹಳ್ಳಿ ಮನೆಯಲ್ಲಿ ಕಾಲ ಕಳೆಯುತ್ತಿದ್ದಾಗ ಮನೆ ನಂದಗೋಕುಲದಂತೆ ಕಲಕಲ ಎನಿಸುತ್ತಿತ್ತು.
ಬೆಂಗಳೂರಿನಿಂದ ಬೆಳಗಿನ ಐದು ಗಂಟೆಗೆ ಕಾರಿನಲ್ಲಿ ಹೊರಟಾಗ ಹೊನ್ನಮ್ಮ ಸಂಭ್ರಮದಲ್ಲಿದ್ದಳು. ಶಂಕರ ಡೈವ್ ಮಾಡುತ್ತಿದ್ದ. ಕಾರಿನಲ್ಲಿ ಇಬ್ಬರೇ. ಲಘುವಾದ ಸಂಗೀತ. ವಾಹನ ದಟ್ಟಣೆ ಇಲ್ಲದ ಕಾರಣ ಬೇಗನೇ ಬೆಂಗಳೂರು ದಾಟಿದರು. 'ಅಷ್ಟೇನೂ ಅವಸರ ಇಲ್ಲ. ನಿಧಾನ ಹೋಗೋಣ. ಸಂಜೆಯ ಹೊತ್ತಿಗೆ ಊರು ಸೇರಿದರೂ ಪರವಾಯಿಲ್ಲ. ಡೈವ್ ಕೂಡ ಎಂಜಾಯ್ ಮಾಡಿ. ಅಪಾಯಕ್ಕೆ ಎಡೆಕೊಡದಂತೆ ಹೋಗೋಣ' ಎಂದು ಹೊನ್ನಮ್ಮ ಹೇಳಿದಾಗ ಅದಕ್ಕೆ ಶಂಕರ ಪ್ರತಿ ಹೇಳಲಿಲ್ಲ. ಬೆಳಗಿನ ಹೊತ್ತು ಅರುಣೋದಯಕ್ಕೆ ಮೊದಲೇ ಬಿಸಿ ಬಿಸಿ ನೀರಿನ ಸ್ನಾನ ಮುಗಿಸಿ ಬೆಳಗಿನ ಪ್ರಯಾಣದ ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಹೊನ್ನಮ್ಮನಿಗೆ ತಾನು ಮೊದಲ ಬಾರಿಗೆ ಊರಿನಲ್ಲಿ ಅಷ್ಟೇ ಹೊತ್ತಿನಲ್ಲಿ ನಡೆದ ಭೂಮಿ ಹುಣ್ಣಿಮೆ ಹಬ್ಬದಲ್ಲಿ ಪಾಲ್ಗೊಂಡಿದ್ದು ನೆನಪಿಗೆ ಬಂತು.
ಮಕ್ಕಳು ಹೈಸ್ಕೂಲು ದಿನಗಳಲ್ಲಿದ್ದರು. ಹುಬ್ಬಳ್ಳಿಯ ಸೇಂಟ್ ಮೇರಿಸ್ ಶಾಲೆಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳಾಗಿದ್ದ ಅವರಿಗೆ ರಜೆ ಇರಲಿಲ್ಲ. ದೀಪಾವಳಿಗೆ ಹದಿನೈದು ದಿನ ಮೊದಲೇ ಬರುವ ಭೂಮಿ ಹುಣ್ಣಿಮೆ ಹಬ್ಬದಲ್ಲಿ ಭಾಗವಹಿಸಲೆಂದೇ ಶಾಲೆಯ ಪ್ರಿನ್ಸಿಪಾಲ್ ಮಸ್ಕರೇನ್ವಸ್ ಎಂಬುವರಿಂದ ನಾಲ್ಕು ದಿನಗಳ ವಿಶೇಷ ಅನುಮತಿ ಪಡೆದು ಊರಿಗೆ ಬಂದಿದ್ದರು. ಹಬ್ಬದ ಮುನ್ನಾದಿನ ಬಸ್ಸು ಹಿಡಿದು
ಊರು ಸೇರುವಾಗ ಸಂಜೆಯೇ ಆಗಿತ್ತು. ಶಂಕರನಿಗೆ ಭೂಮಿ ಹುಣ್ಣಿಮೆ ಹಬ್ಬದಲ್ಲಿ ಅನೇಕ ವರ್ಷಗಳ ನಂತರ ಭಾಗಿಯಾಗುವ ಸಡಗರ ಮಕ್ಕಳಿಬ್ಬರಿಗೆ ಹಬ್ಬದ ವಿವರಗಳನ್ನು ತಿಳಿಸುವ ಸಂಭ್ರಮ, ಮನೆಯಲ್ಲಿ ಆಗುತ್ತಿದ್ದ ಹಬ್ಬದ ಸಿದ್ದತೆಗಳನ್ನು ಕನ್ನಡ ಮತ್ತು ಇಂಗ್ಲಿಷಿನಲ್ಲಿ ವಿವರಿಸುತ್ತಿದ್ದರೆ ಹಿರಿಯ ಮಗ ಶರಣ್' 'ಇದೆಲ್ಲ ಇಂಗ್ಲಿಷಿನಲ್ಲಿ ಯಾಕೆ ಹೇಳುತ್ತೀರಿ. ಕನ್ನಡದಲ್ಲಿ ಹೇಳಬಾರದೇ' ಎಂದು ಶಂಕರನಿಗೆ ಕೇಳಿದ್ದ. ಅವನ ಆಕ್ಷೇಪ ಅಪ್ಪನ ಇಂಗ್ಲಿಷನ್ನು ಕುರಿತದ್ದು ಎಂಬುದು ಹೊನ್ನಮ್ಮನಿಗೆ ಅರ್ಥವಾಗಿತ್ತು. 'ಆಯ್ಯೋ ಮಾರಾಯ' ಎಂದು ಶಂಕರ ತಪ್ಪೆಸಗಿದ ಭಾವದಲ್ಲಿ ಒಪ್ಪಿಕೊಂಡಿದ್ದ.
ಭೂಮಿ ಹುಣ್ಣಿಮೆ ಹಬ್ಬವೆಂದರೆ ಬೆಳೆದು ನಿಂತ ಬತ್ತದ ಪೈರಿನ ಎದುರಿಗೆ ಪೂಜೆ ಸಲ್ಲಿಸಿ ಸಮೃದ್ಧಿಯನ್ನು ಬೇಡುವ ಸಂದರ್ಭ ಎಂದು ಶಂಕರ ತನಗೆ ತಿಳಿದಂತೆ ವಿವರಿಸಿದ್ದ. ಮಳೆಗಾಲ ಕಳೆದು ಗದ್ದೆಗಳಲ್ಲಿ ಪೈರು ತುಂಬಿದಾಗ ಬಸಿರಿಯಂತೆ ಭೂಮಿ ಕಂಗೊಳಿಸುತ್ತದೆ. ಬಸಿರಿಗೆ ಬಯಕೆ ಸಲ್ಲಿಸುವಂತೆ ರೈತರು ಈ ಹಬ್ಬ ಮಾಡುತ್ತಾರೆ ಎಂದೇನೋ ಶಂಕರ ವಿವರಿಸಿದ್ದ. ಊರಲ್ಲಿ ಮನೆಯ ಹೆಂಗಸರು ಸೀಮಂತಕ್ಕೆ ಮಾಡುವಂತೆ ರಾತ್ರಿಯೆಲ್ಲ ಸಡಗರದಲ್ಲಿ ಬಗೆಬಗೆಯ ತರಕಾರಿ ಪಲ್ಯಗಳನ್ನು, ಹೋಳಿಗೆಯನ್ನು ಮಾಡಿ ಬೆಳಗಿನ ಜಾವದ ಹೊತ್ತಿಗೆ ಅಣಿಗೊಳಿಸುತ್ತಿದ್ದರು. ಹಬ್ಬದ ಮುನ್ನಾದಿನ ಸೊಪ್ಪು ಹೆರಕುವ ಪದ್ಧತಿ ಇರುವುದನ್ನು ಹೊನ್ನಮ್ಮ ಕೇಳಿ ತಿಳಿದುಕೊಂಡಿದ್ದಳು. ತಿನ್ನಬಹುದಾದ ವಿಧವಿಧದ ಸೊಪ್ಪುಗಳನ್ನು ಹೆಕ್ಕಿ ತಂದು ಮಾಡುವ ಪಲ್ಯ ಭೂಮಿತಾಯಿಗೆ ಇಷ್ಟ ಎಂದೇನೋ ಅವನು ಹೇಳಿದ್ದ. ಹೆಂಗಸರು ಆ ದಿನ ಸ್ನಾನ ಮಾಡಿ ಮಡಿಯಲ್ಲಿ ಕುಕ್ಕೆಗಳನ್ನು ಹಿಡಿದು ಬೆರಕೆ ಸೊಪ್ಪನ್ನು ಸಂಗ್ರಹಿಸುವುದಕ್ಕೆ ಸೊಪ್ಪು ಹೆರಕುವುದು ಎಂದು ಕರೆಯುವ ಪದ್ಧತಿಯನ್ನು ಅವನು ವಿವರಿಸಿದ್ದ. ಮನೆತನಗಳನ್ನು ಅನುಸರಿಸಿ ಕೆಲವರು ಭೂಮಿ ಹುಣ್ಣಿಮೆಗಾಗಿ.
ಅಲಂಕಾರಿಕ ಕುಕ್ಕೆಗಳನ್ನು ಇಟ್ಟುಕೊಳ್ಳುತ್ತಾರೆ. ಭೂಮಣ್ಣಿ ಕುಕ್ಕೆಗಳನ್ನು ಜೇಡಿ. ಕೆಮ್ಮಣ್ಣು ಹುರಿಮಂಜಿನ ಚಿತ್ತಾರಗಳಲ್ಲಿ ಅಲಂಕರಿಸುವ ಪರಿಣಿತಿಯಲ್ಲಿಯೇ ಊರಿನ ಹೆಂಗಸರ ಕಲಾಕೌಶಲ್ಯವನ್ನು ತಿಳಿಯಬಹುದೆಂದು ಅವನು ತುಂಬ ಭಾವುಕನಾಗಿಯೂ ಹೇಳಿದ್ದ. ಆ ದಿನ ಅವರು ಬರುವುದು ಸಂಜೆಯಾಗಿದ್ದರಿಂದ ಬೆರಕೆ ಸೊಪ್ಪು ಹೆರಕುವುದಕ್ಕೆ ಹೊನ್ನಮ್ಮನಿಗೆ ಅವಕಾಶವಾಗಿರಲಿಲ್ಲ. ಆದರೆ ಅಂದಿನ ರಾತ್ರಿಯ ಅಡಿಗೆ ಸಿದ್ಧತೆಯಲ್ಲಿ ಅವಳು ಮಧ್ಯರಾತ್ರಿಯವರೆಗೂ ಎಚ್ಚರವಾಗಿದ್ದು ಕೈಲಾಗಿದ್ದನ್ನು ಮಾಡಿದ್ದಳು.
ಹಬ್ಬದ ಮುನ್ನಾದಿನದ ರಾತ್ರಿಯೂಟದಲ್ಲಿ ಮೊದಲಿಗೆ ಹಲವು ಬಗೆಯ ಗೆಣಸನ್ನು ಬೇಯಿಸಿ ತಟ್ಟೆಗೆ ಹಾಕಿ ಅದಕ್ಕೆ ಬೆಲ್ಲ ಹಾಲನ್ನು ಬಡಿಸಿದ್ದರು. ಹೆಂಗಸರು ಬೆರಕೆ ಸೊಪ್ಪು, ತರಕಾರಿಯನ್ನು ಹಿತ್ತಲಿನಲ್ಲಿ ಸಂಗ್ರಹಿಸಿದರೆ ಗಂಡಸರು ಹಾರೆ ಪಿಕಾಸಿ ಕತ್ತಿಗಳನ್ನು ಹಿಡಿದು ಕಾಡಿನಲ್ಲಿ ಬೆಳೆದ ಗೆಣಸನ್ನು ಅಗೆದು ತರುವುದು ಭೂಮಿ ಹಬ್ಬದ ಪದ್ಧತಿಯಂತೆ. ಕಾಡಿನಲ್ಲಿ ಬೆಳೆಯುವ ಖಾದ್ಯಯೋಗ್ಯ ಗೆಣಸನ್ನು ಅಗೆದು ತರುವುದು ಪದ್ಧತಿಯಾದರೂ ಕೆಲವರು ಭೂಮಿ ಹುಣ್ಣಿಮೆ ಹಬ್ಬದ ಸಲುವಾಗಿಯೇ ಬೆಲ್ಲಗೆಣಸು
ಎಂಬ ಸಿಹಿ ಗಣಸನ್ನು ಬೆಳೆಯುತ್ತಾರೆ ಎಂದು ಶಂಕರ ತಿಳಿಸಿದ್ದ. ಊರಿನ ಕೆಲವು ಸಾಹಸಿಗಳು ಸೊಪ್ಪು ಹೆರಕುವ ದಿನವೇ ಸೋ ಬೇಟೆ ನಡೆಸಿ ಕಾಡಿನಲ್ಲಿ ಗ್ರಾಚಾರ ಕೆಟ್ಟ ಹಂದಿ-ಮಿಕಗಳ ಶಿಕಾರಿ ಮಾಡುವ ಪದ್ಧತಿಯೂ ಇತ್ತೆಂದು ಊಟ ಮಾಡುತ್ತಿದ್ದಾರೆ ಹೇಳಿದ್ದ. ಊರಿನ ಸುತ್ತಲ ಕಾಡೆಲ್ಲ ಅರಣ್ಯ ಇಲಾಖೆಯ ಗಸ್ತಿಗೆ ಒಳಪಟ್ಟ ಮೇಲೆ ಯಾವ ರೀತಿಯ ಬೇಟೆಯನ್ನೂ ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಊರಿನ ಯುವಕರು ಪೇಚಾಡುತ್ತಿದ್ದಾರೆ, ಎಂದು ಅವನು ಹೇಳಿದಾಗ ಬಾಯನ್ನು ಸ್ವಲ್ಪಮಟ್ಟಿಗೆ ಸೊಟ್ಟದಾಗಿ ಮಾಡಿ ಹೊನ್ನಮ್ಮ 'ಮಹಾ ಶಿಕಾರಿದಾರರು, ಪಾಪದ ಪ್ರಾಣಿಗಳಿಗೆ ಗುಂಡಿಟ್ಟು ಕೊಲ್ಲುವುದು ಯಾವ ದೊಡ್ಡ ಸಾಹಸ' ಎಂದು ತನ್ನ ಅಸಮಾಧಾನ ವ್ಯಕ್ತಪಡಿಸಿದ್ದಳು. ಶಂಕರನ ಸಮುದಾಯದ ಎಲ್ಲ ಬಗೆಯ ಜೀವನ ವಿಧಾನವನ್ನೂ ಸಹಿಸಿಕೊಂಡಿದ್ದ ಅವಳಿಗೆ ಮಾಂಸವನ್ನು ಕೈಯಲ್ಲಿ ಮುಟ್ಟುವ, ಬೇಯಿಸುವ, ಬಡಿಸುವ ಕೆಲಸ ಸಾಧ್ಯವೇ ಆಗಿರಲಿಲ್ಲ. ಮಕ್ಕಳಾದ ಶರಣ್ ಮತ್ತು ಕಿರಣ್ ಅಪ್ಪನ ಜತೆ ಸೇರಿ ಕೋಳಿ- ಮೀನಿನ ಖಾದ್ಯಗಳನ್ನು ತಿನ್ನತೊಡಗಿದಾಗ ಅದನ್ನು ತಪ್ಪಿಸಲು ಕೂಡ ಸಾಧ್ಯವಾಗಲಿಲ್ಲ. ಮಕ್ಕಳು ಇಷ್ಟಪಡುವುದು ಗೊತ್ತಾದ ಮೇಲೆ ತಿಂಗಳಿಗೆ ಒಮ್ಮೆಯಾದರೂ ಹೋಟೆಲಿನಿಂದ ಮಕ್ಕಳಿಗಾಗಿ ಕೋಳಿಯ ಖಾದ್ಯಗಳನ್ನು ತರುವಂತೆ ಶಂಕರನಿಗೆ ತಾಕೀತು ಮಾಡುತ್ತಿದ್ದಳು.
ಭೂಮಿ ಹುಣ್ಣಿಮೆ ಹಬ್ಬದ ಪ್ರಧಾನ ಅಂಗವೇ ನಸುಕಿನಲ್ಲಿ ಗದ್ದೆ ಬದಿಗೆ ತೆರಳಿ ಭೂಮಿ ಪೂಜೆಯನ್ನು ನೆರವೇರಿಸುವುದು. ಹಿಂದಿನ ದಿನ ಪೂಜೆಯ ಸ್ಥಳವನ್ನು ಅಣಿಗೊಳಿಸುವ ಕೆಲಸವನ್ನು ಮನೆಯ ಗಂಡಸರು ಮಾಡಿ ಬರುತ್ತಿದ್ದರು. ನೀರು ನಿಂತ ಗದ್ದೆಯ ಹಾಳಿಯ ಮೇಲೆ ಪಕ್ಕದಲ್ಲಿ ಉದ್ದನೆಯ ಬಾಳೆಎಲೆಗಳನ್ನು ಹಾಸುತ್ತಿದ್ದರು. ಕೊರಡನ್ನು ಅಡ್ಡ ಇಟ್ಟು ಪೂಜೆಯ ವೇದಿಕೆಯನ್ನು ನಿರ್ಮಿಸುತ್ತಿದ್ದರು. ಬೆಳೆದು ನಿಂತ ಬತ್ತದ ಸಸಿಗಳಿಗೆ ಹೊಂದಿಕೊಂಡಂತೆ ಸಣ್ಣ ಎರಡು ಬಾಳೆಯ ಕಂದುಗಳನ್ನು ಗೂಟಗಳ ಆಸರೆ ಕೊಟ್ಟು ಹೂತು ನಿಲ್ಲಿಸಿ ಮಾವಿನ ಸೊಪ್ಪಿನ ತೋರಣ ಕಟ್ಟುತ್ತಿದ್ದರು. ಹಣತೆಯನ್ನಿಡಲು ಬಾಳೆಯ ದಿಂಡನ್ನು ಹೂಳಿ ಕಿರು ವೇದಿಕೆಯನ್ನು ಮಾಡುತ್ತಿದ್ದರು. ನಸುಕಿನಲ್ಲಿ ಮನೆಯವರೆಲ್ಲ ಎದ್ದು ಮಡಿಯಾಗಿ ಪೂಜೆಯ ಸಾಮಗ್ರಿ ಜತೆಗೆ ರಾತ್ರಿಯೆಲ್ಲ ಸಿದ್ಧಪಡಿಸಿದ ತಿನಿಸುಗಳನ್ನೆಲ್ಲ ಒಯ್ದು ಗದ್ದೆ ಹಾಳಿಯಲ್ಲಿಟ್ಟು ಬತ್ತದ ಪೈರಿಗೆ ಪೂಜೆ ಸಲ್ಲಿಸುವುದಕ್ಕೆ ಅಚ್ಚುವುದು ಎಂದು ಕರೆಯುತ್ತಾರೆ ಎಂದು ಶಂಕರ ಹೊನ್ನಮ್ಮನಿಗೂ ಮಕ್ಕಳಿಗೂ ಹೇಳಿದ್ದ. ಮನೆಯ ಗಂಡಸರಲ್ಲಿ ನಸುಕಿನಲ್ಲೇ ಎದ್ದು ಸ್ನಾನ ಮಾಡಿ ಮಡಿಯಾದವರು ಪೂಜೆ ಸಲ್ಲಿಸುತ್ತಿದ್ದರು. ಆ ಸಂದರ್ಭದಲ್ಲಿಯೇ ಎಲ್ಲರ ಬಲಗೈಗೆ, ಭೂಮಿಗೂ ಅದನ್ನು ಹೂಳಿ ಬಳಸುವವರಿಗೂ ಇರುವ ಬಾಂಧವ್ಯದ ಸಂಕೇತವಾಗಿ ಬಣ್ಣದ ನೂಲನ್ನು ಕಂಕಣದಂತೆ ಕಟ್ಟಿಕೊಳ್ಳುವುದು. 'ಅದಕ್ಕೆ ಹಂಗುನೂಲು ಅಂತಾರೆ. ಭೂಮಿಯ ಋಣ ನಮ್ಮ ಮೇಲಿರುವುದಕ್ಕೆ ಸಂಕೇತ ಇದು' ಎಂದೇನೋ ಶಂಕರ ಹೇಳಿದ್ದ. ಶಂಕರನ ದೊಡ್ಡ ಮಗ ಶರಣ್ ತಾನೇ ಮುಂದೆ ಚಾಚಿ ಹಂಗುನೂಲು ಕಟ್ಟಿಕೊಂಡಿದ್ದ. ಚಿಕ್ಕ ಮಗ ಕಿರಣ್ ಬಲವಂತಕ್ಕೆ
ಕಟ್ಟಿಸಿಕೊಂಡನಾದರೂ ಸ್ವಲ್ಪ ಹೊತ್ತಿಗೆ ಬಾಯಲ್ಲಿ ಕಚ್ಚಿ ಬಿಚ್ಚಿಹಾಕಿದ್ದ. 'ಇದನ್ನು ಎಷ್ಟು ಹೊತ್ತಿಗೆ ಬಿಚ್ಚುವುದು' ಎಂದು ಶರಣ್ ಕೇಳಿದ್ದಕ್ಕೆ ಅಚ್ಚಲು ಬಂದಿದ್ದವರೊಬ್ಬರು 'ಅದನ್ನು ಈಗಲ್ಲ ಕಣೋ ತಮ್ಮ ಬಿಚ್ಚಾದು, ಸಂಕ್ರಮಣದ ದಿನ ಗೊಣಬೆಗೆ ಪೂಜೆ ಮಾಡಿ ಆಗ ಅದಕ್ಕೆ ಕಟ್ಟೋದು' ಎಂದು ಹಂಗುನೂಲಿನ ರಿವಾಜನ್ನು ನೆನಪಿಗೆ ತಂದಿದ್ದರು.
'ಊರಲ್ಲಿ ಭೂಮಿ ಹುಣ್ಣಿಮೆ ಹಬ್ಬ ಎಂಥ ದೊಡ್ಡ ಕಲ್ಪನೆ ಅಲ್ಲ' ಎಂದು ಹೊನ್ನಮ್ಮ ಹೇಳಿದಾಗ ತಕ್ಷಣಕ್ಕೆ ಅದರ ಪೂರ್ವಾಪರ ಅರಿವಿಲ್ಲದ ಶಂಕರ ಕೂಡಲೇ ಪ್ರತಿಕ್ರಿಯೆ ನೀಡಲಿಲ್ಲ. ಚಾಲನೆಯಲ್ಲಿ ದೃಷ್ಟಿ ನೆಟ್ಟಾಗ ಮಾತಾಡಿ ಗಮನ ಸೆಳೆಯುವುದು ಸರಿಯಲ್ಲ ಎಂದು ಸುಮ್ಮನಾದ ಹೊನ್ನಮ್ಮ, ಶಂಕರ ಕಚೇರಿಯ ಗುಂಗಿನಲ್ಲಿಯೇ ಇನ್ನೂ ಇದ್ದಾನೆ ಎಂದುಕೊಂಡಳು. ಶಂಕರನಿಗೂ ಅದರ ಗುಂಗು ಹೋಗಿರಲಿಲ್ಲ. ಕಾರಿನಲ್ಲಿ ಲಘುವಾಗಿ ಯಾವುದೋ ಸಂಗೀತ ಕೇಳಿ ಬರುತ್ತಿದ್ದರೂ ಅವನ ಯೋಚನಾ ಲಹರಿ ಕಚೇರಿಯ ಪರಿಸರದಲ್ಲಿಯೇ ಸುತ್ತುತ್ತಿತ್ತು. ಹೊನ್ನಮ್ಮ ಭೂಮಿಹುಣ್ಣಿಮೆ ಹಬ್ಬದ ಪ್ರಸ್ತಾಪ ಮಾಡಿದಾಗ ತನ್ನ ಗುಂಗಿನಿಂದ ಹೊರಬಂದ. 'ಹೌದು ಹೌದು. ಆದರೆ ಈಗ ಯಾರು ಅಷ್ಟೆಲ್ಲ ಮಾಡುತ್ತಾರೆ. ಊರಲ್ಲಿ ಈ ಸಲ ಆ ಹಬ್ಬವನ್ನಾದರೂ ಮಾಡಿದರೋ ಇಲ್ಲವೋ, ನಾವಂತೂ ಹೋಗಿ ಎಷ್ಟೋ ವರ್ಷಗಳಾದುವಲ್ಲ' ಎಂದು ಅವಳ ಮಾತಿನ ಲಹರಿಗೆ ಬಂದ. ಅಷ್ಟು ಹೊತ್ತಿಗೆ ಕ್ಯಾತ್ಸಂದ್ರದ ಬಳಿ ಬಂದಾಗಿತ್ತು. 'ಇಲ್ಲಿ ಇಡ್ಲಿ ತಿನ್ನುವ ರಿವಾಜು ಇದೆಯಲ್ಲ..' ಎಂದು ಹೊನ್ನಮ್ಮನೇ ಬೆಳಗಿನ ತಿಂಡಿಯ ನೆನವು ಮಾಡಿಕೊಟ್ಟಳು.
ಕ್ಯಾತ್ಸಂದ್ರದಲ್ಲಿ ಕಾರು ನಿಲ್ಲಿಸಿ ಇಳಿದಾಗ ಹೊನ್ನಮ್ಮನಿಗೆ ತನ್ನ ಬಾಲ್ಯದ ದಿನಗಳ ನೆನಪಾಯಿತು. ಸಿದ್ದಗಂಗೆಯ ಜಾತ್ರೆಗೆ ಬಂದು ಮಠದಲ್ಲಿ ಊಟ ಮಾಡಿ ತಿರುಗಾಡಿ ಹೋದದ್ದೆಲ್ಲ ನೆನಪಿಗೆ ಬಂತು. ತಿಂಡಿ ತಿಂದಾದ ನಂತರ ಸ್ವಾಮೀಜಿ ಅವರನ್ನು ಸಂದರ್ಶಿಸಿ ಹೋಗಬಹುದೆನ್ನುವ ವಿಚಾರ ತಲೆಯಲ್ಲಿ ಸುಳಿಯಿತಾದರೂ ಇಂಥವೆಲ್ಲ ಶಂಕರನಿಗೆ ಇಷ್ಟವಾಗುವುದಿಲ್ಲ ಎಂದುಕೊಂಡು ತಕ್ಷಣಕ್ಕೆ ಬಿಸಿ ಬಿಸಿ ತಟ್ಟೆ ಇಡ್ಲಿಯತ್ತ ಗಮನ ಹರಿಸಿದಳು. ಎರಡು ಪ್ಲೇಟ್ ತಟ್ಟೆ ಇಡ್ಲಿಗೆ ಆರ್ಡರು ಮಾಡಿ ಕುಳಿತಾಗ ಶಂಕರನಲ್ಲಿ ತಾವೆಲ್ಲ ಸಿದ್ಧಗಂಗೆಯ ಜಾತ್ರೆಗೆ ಬಂದು ಹೋಗುತ್ತಿದ್ದುದರ ನೆನಪನ್ನು ಬಿಡಿಸಿದಳು.
ಭೂಮಿ ಹುಣ್ಣಿಮೆ –ಪಾಠದ ಸಾರಾಂಶ
'ಭೂಮಿ ಹುಣ್ಣಿಮೆ' ಕಥೆಯು ಮಲೆನಾಡಿನ ರೈತರ ಬದುಕು, ಭೂಮಿಯೊಂದಿಗೆ ಅವರ ಅವಿನಾಭಾವ ಸಂಬಂಧ, ಹಳ್ಳಿಯ ಸಂಪ್ರದಾಯಗಳು ಹಾಗೂ ಆಧುನಿಕ ಜೀವನದಿಂದ ಉಂಟಾಗುವ ಬದಲಾವಣೆಗಳನ್ನು ಮನಮುಟ್ಟುವಂತೆ ಚಿತ್ರಿಸುತ್ತದೆ.
ಕಥೆಯ ನಾಯಕ ಶಂಕರ ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿರುತ್ತಾನೆ. ದೀರ್ಘಕಾಲದ ಪ್ರಾಮಾಣಿಕ ಸೇವೆಯಿದ್ದರೂ ಅವನಿಗೆ ಬಡ್ತಿ ಸಿಗದೆ, ತನಗಿಂತ ಕಿರಿಯ ಅಧಿಕಾರಿಗೆ ಬಡ್ತಿ ದೊರೆಯುವುದರಿಂದ ಅವನು ಮನನೊಂದಿರುತ್ತಾನೆ. ಈ ಸಂದರ್ಭದಲ್ಲಿ ಅವನ ಪತ್ನಿ ಹೊನ್ನಮ್ಮ ಊರಿಗೆ ಹೋಗಿ ಗದ್ದೆ-ತೋಟಗಳನ್ನು ನೋಡಿಬರೋಣ ಎಂದು ಸಲಹೆ ನೀಡುತ್ತಾಳೆ. ಅವಳ ಮಾತಿಗೆ ಒಪ್ಪಿದ ಶಂಕರ ಊರಿಗೆ ಹೊರಡುತ್ತಾನೆ.
ಪ್ರಯಾಣದ ವೇಳೆ ಹೊನ್ನಮ್ಮಗೆ ಹಿಂದೆ ಊರಲ್ಲಿ ಆಚರಿಸಿದ **ಭೂಮಿ ಹುಣ್ಣಿಮೆ** ಹಬ್ಬದ ನೆನಪುಗಳು ಬರುತ್ತವೆ. ಈ ಹಬ್ಬದಲ್ಲಿ ರೈತರು ಬೆಳೆದು ನಿಂತ ಭತ್ತದ ಬೆಳೆಗೆ ಪೂಜೆ ಸಲ್ಲಿಸಿ, ಭೂಮಾತೆಯ ಕೃಪೆ ಹಾಗೂ ಸಮೃದ್ಧಿಯನ್ನು ಪ್ರಾರ್ಥಿಸುತ್ತಾರೆ. ಹಬ್ಬದ ಮುನ್ನಾದಿನ ವಿವಿಧ ಸೊಪ್ಪುಗಳು, ತರಕಾರಿಗಳು, ಗೆಣಸು, ಹೋಳಿಗೆ ಮುಂತಾದ ತಿನಿಸುಗಳನ್ನು ತಯಾರಿಸಲಾಗುತ್ತದೆ. ನಸುಕಿನಲ್ಲಿ ಗದ್ದೆಯ ಬಳಿ ವಿಶೇಷ ಪೂಜೆ ನಡೆಯುತ್ತದೆ. ಎಲ್ಲರೂ **ಹಂಗುನೂಲು** ಕಟ್ಟಿಕೊಂಡು ಭೂಮಿಯೊಂದಿಗೆ ತಮ್ಮ ಬಾಂಧವ್ಯವನ್ನು ಸಂಕೇತಿಸುತ್ತಾರೆ.
ನಗರದಲ್ಲಿ ಬೆಳೆದಿದ್ದರೂ ಹೊನ್ನಮ್ಮ ಮಲೆನಾಡಿನ ಸಂಸ್ಕೃತಿ, ಆಚರಣೆಗಳನ್ನು ಮನಸಾರೆ ಒಪ್ಪಿಕೊಂಡು ಮನೆಯವರೊಡನೆ ಬೆರೆತು ಬದುಕುತ್ತಾಳೆ. ಆದರೆ ಪ್ರಾಣಿಗಳ ಬೇಟೆ ಮತ್ತು ಮಾಂಸಾಹಾರದ ಬಗ್ಗೆ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಾಳೆ. ಮಕ್ಕಳಿಗೂ ಊರಿನ ಸಂಪ್ರದಾಯಗಳನ್ನು ಪರಿಚಯಿಸಲು ಶಂಕರ ಪ್ರಯತ್ನಿಸುತ್ತಾನೆ.
ಈ ಕಥೆಯಲ್ಲಿ ಗ್ರಾಮೀಣ ಸಂಸ್ಕೃತಿ, ರೈತರ ಜೀವನ, ಪ್ರಕೃತಿಯ ಮೇಲಿನ ಗೌರವ ಮತ್ತು ನಗರೀಕರಣದಿಂದ ಸಂಪ್ರದಾಯಗಳು ನಿಧಾನವಾಗಿ ಮರೆಯಾಗುತ್ತಿರುವ ನೋವನ್ನು ಲೇಖಕರು ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಮುಖ್ಯ ಆಶಯ:
ಭೂಮಿಯನ್ನು ತಾಯಿಯಂತೆ ಪೂಜಿಸುವ ಭಾರತೀಯ ಕೃಷಿ ಸಂಸ್ಕೃತಿಯ ಮಹತ್ವ, ರೈತರ ಜೀವನಮೌಲ್ಯಗಳು ಹಾಗೂ ಸಂಪ್ರದಾಯಗಳನ್ನು ಉಳಿಸಿಕೊಳ್ಳುವ ಅಗತ್ಯವನ್ನು ಈ ಕಥೆ ಸಾರುತ್ತದೆ.
ಸಂಭಾವ್ಯ ಪ್ರಶ್ನೆಗಳು:
೧. ಬಡ್ತಿ ವಿಚಾರದಲ್ಲಿ ಶಂಕರನಿಗೆ ಆದ ಅನ್ಯಾಯವೇನು?
ಶಂಕರನು ಖಾಸಗಿ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮತ್ತು ಶ್ರಮಪಟ್ಟು ಸೇವೆ ಸಲ್ಲಿಸಿದ್ದ ಹಿರಿಯ ಅಧಿಕಾರಿಯಾಗಿದ್ದನು. ರಾಜ್ಯದ ವಿವಿಧ ಪ್ರಾದೇಶಿಕ ಕಚೇರಿಗಳಲ್ಲಿ ಯಶಸ್ವಿಯಾಗಿ ಕೆಲಸ ಮಾಡಿದ ಅನುಭವವೂ ಅವನಿಗಿತ್ತು. ಆದ್ದರಿಂದ ಬೆಂಗಳೂರು ಕೇಂದ್ರ ಕಚೇರಿಯ ವಿಭಾಗ ಮುಖ್ಯಸ್ಥನ ಹುದ್ದೆಗೆ ಶಂಕರನಿಗೇ ಬಡ್ತಿ ಸಿಗುತ್ತದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು.
ಆದರೆ ಸಂಸ್ಥೆಯ ಆಡಳಿತವು ಅವನಿಗಿಂತ ನಾಲ್ಕೈದು ವರ್ಷ ಕಿರಿಯ ಅಧಿಕಾರಿಗೆ ಅನಿರೀಕ್ಷಿತವಾಗಿ ಬಡ್ತಿ ನೀಡಿತು. ಇದರಿಂದ ಶಂಕರನ ದೀರ್ಘಕಾಲದ ಸೇವೆ, ಅನುಭವ ಮತ್ತು ಪ್ರಾಮಾಣಿಕತೆಯನ್ನು ಕಡೆಗಣಿಸಲಾಯಿತು. ಈ ಅನ್ಯಾಯದಿಂದ ಅವನು ತೀವ್ರವಾಗಿ ಮನನೊಂದು, ತನ್ನ ಸೇವೆಗೆ ಸೂಕ್ತ ಗೌರವ ದೊರೆಯಲಿಲ್ಲ ಎಂಬ ಬೇಸರಕ್ಕೆ ಒಳಗಾದನು. ರಾಜೀನಾಮೆ ನೀಡುವ ಆಲೋಚನೆಯೂ ಅವನಿಗೆ ಬಂದಿತು. ಹೀಗಾಗಿ, **ಅನುಭವ ಮತ್ತು ಅರ್ಹತೆ ಇದ್ದರೂ ಬಡ್ತಿಯಲ್ಲಿ ಕಡೆಗಣಿಸಲ್ಪಟ್ಟದ್ದೇ ಶಂಕರನಿಗೆ ಆದ ಅನ್ಯಾಯವಾಗಿದೆ.**
೨. ಶಂಕರನ ಮಾನಸಿಕ ತೊಳಲಾಟಕ್ಕೆ ಕಾರಣವೇನು?
ಶಂಕರನು ಖಾಸಗಿ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಹಾಗೂ ಶ್ರಮಪಟ್ಟು ಸೇವೆ ಸಲ್ಲಿಸಿದ್ದ ಹಿರಿಯ ಅಧಿಕಾರಿಯಾಗಿದ್ದನು. ರಾಜ್ಯದ ವಿವಿಧ ಕಚೇರಿಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ ಅನುಭವ ಅವನಿಗಿತ್ತು. ಆದರೂ, ವಿಭಾಗ ಮುಖ್ಯಸ್ಥನ ಹುದ್ದೆಗೆ ಅವನನ್ನು ಪರಿಗಣಿಸದೆ, ಅವನಿಗಿಂತ ನಾಲ್ಕೈದು ವರ್ಷ ಕಿರಿಯ ಅಧಿಕಾರಿಗೆ ಬಡ್ತಿ ನೀಡಲಾಯಿತು.
ಈ ಅನ್ಯಾಯದಿಂದ ಶಂಕರನಿಗೆ ತನ್ನ ಸೇವೆ, ಅನುಭವ ಮತ್ತು ಪ್ರಾಮಾಣಿಕತೆಗೆ ಬೆಲೆ ಇಲ್ಲವೆಂಬ ಭಾವನೆ ಉಂಟಾಯಿತು. ತನ್ನನ್ನು ಕಡೆಗಣಿಸಲಾಗಿದೆ ಎಂಬ ನೋವು ಅವನ ಮನಸ್ಸನ್ನು ಕಾಡಿತು. ಕಚೇರಿಗೆ ಹೋದಾಗಲೆಲ್ಲ ಈ ವಿಚಾರವೇ ಅವನನ್ನು ಕಳವಳಗೊಳಿಸುತ್ತಿತ್ತು. ರಾಜೀನಾಮೆ ನೀಡುವ ಆಲೋಚನೆಯೂ ಅವನಿಗೆ ಬಂದಿತ್ತು. ಆದರೆ ಹೊನ್ನಮ್ಮನ ಧೈರ್ಯದ ಮಾತುಗಳಿಂದ ಅವನು ಕೆಲಸ ಮುಂದುವರಿಸಲು ನಿರ್ಧರಿಸಿದನು.
**ಹೀಗಾಗಿ, ತನ್ನ ಅರ್ಹತೆ ಮತ್ತು ದೀರ್ಘಕಾಲದ ಸೇವೆಯನ್ನು ಕಡೆಗಣಿಸಿ ಕಿರಿಯ ಅಧಿಕಾರಿಗೆ ಬಡ್ತಿ ನೀಡಿದ್ದೇ ಶಂಕರನ ಮಾನಸಿಕ ತೊಳಲಾಟಕ್ಕೆ ಮುಖ್ಯ ಕಾರಣವಾಗಿದೆ.**
೩. ಖಾಸಗಿ ವಲಯದಲ್ಲಿ ಪ್ರಾಮಾಣಿಕ ಕೆಲಸಕ್ಕೆ ಬೆಲೆ ಇಲ್ಲ ಹೇಗೆ? 'ಭೂಮಿ ಹುಣ್ಣಿಮೆ' ಕಥೆಯ ಆಧಾರದಿಂದ ವಿಚಾರ ಮಾಡಿ.
'ಭೂಮಿ ಹುಣ್ಣಿಮೆ' ಕಥೆಯಲ್ಲಿ ಲೇಖಕರು ಖಾಸಗಿ ವಲಯದಲ್ಲಿನ ಉದ್ಯೋಗ ಜೀವನದ ಒಂದು ಕಹಿ ವಾಸ್ತವವನ್ನು ಶಂಕರನ ಪಾತ್ರದ ಮೂಲಕ ಚಿತ್ರಿಸಿದ್ದಾರೆ. ಶಂಕರನು ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಹಾಗೂ ಶ್ರಮಪಟ್ಟು ಕೆಲಸ ಮಾಡಿದ ಹಿರಿಯ ಅಧಿಕಾರಿಯಾಗಿದ್ದನು. ರಾಜ್ಯದ ವಿವಿಧ ಪ್ರಾದೇಶಿಕ ಕಚೇರಿಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಉತ್ತಮ ಹೆಸರು ಗಳಿಸಿದ್ದನು. ಆದರೂ, ವಿಭಾಗ ಮುಖ್ಯಸ್ಥನ ಹುದ್ದೆಗೆ ಅವನನ್ನು ಪರಿಗಣಿಸದೆ, ಅವನಿಗಿಂತ ನಾಲ್ಕೈದು ವರ್ಷ ಕಿರಿಯ ಅಧಿಕಾರಿಗೆ ಬಡ್ತಿ ನೀಡಲಾಯಿತು.
ಈ ಘಟನೆಯಿಂದ ಖಾಸಗಿ ಸಂಸ್ಥೆಗಳಲ್ಲಿ ಕೆಲವೊಮ್ಮೆ ಅನುಭವ, ಪ್ರಾಮಾಣಿಕತೆ ಮತ್ತು ನಿಷ್ಠೆಗಿಂತ ಆಡಳಿತದ ನಿರ್ಧಾರಗಳು, ವೈಯಕ್ತಿಕ ಒಲವು ಅಥವಾ ಇತರ ಕಾರಣಗಳಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ ಎಂಬುದು ತಿಳಿಯುತ್ತದೆ. ಶಂಕರನ ದೀರ್ಘಕಾಲದ ಸೇವೆಗೆ ಸೂಕ್ತ ಗೌರವ ಸಿಗದೆ ಅವನು ತೀವ್ರ ಮಾನಸಿಕ ನೋವು ಅನುಭವಿಸುತ್ತಾನೆ. ತನ್ನ ಶ್ರಮಕ್ಕೆ ಬೆಲೆ ಸಿಗಲಿಲ್ಲ ಎಂಬ ಬೇಸರದಿಂದ ರಾಜೀನಾಮೆ ನೀಡುವ ಯೋಚನೆಯೂ ಅವನಿಗೆ ಬರುತ್ತದೆ. ಆದರೆ ಹೊನ್ನಮ್ಮ ಅವನಿಗೆ ಧೈರ್ಯ ತುಂಬಿ, ಕೆಲಸವನ್ನು ಮುಂದುವರಿಸಲು ಪ್ರೇರೇಪಿಸುತ್ತಾಳೆ.
ಹೀಗಾಗಿ, **'ಭೂಮಿ ಹುಣ್ಣಿಮೆ' ಕಥೆಯು ಖಾಸಗಿ ವಲಯದಲ್ಲಿ ಕೆಲವೊಮ್ಮೆ ಪ್ರಾಮಾಣಿಕ ಸೇವೆ ಮತ್ತು ಅನುಭವಕ್ಕೆ ತಕ್ಕ ಗೌರವ ದೊರೆಯುವುದಿಲ್ಲ; ಬಡ್ತಿ ಮತ್ತು ಮಾನ್ಯತೆ ಯಾವಾಗಲೂ ಅರ್ಹತೆಯ ಆಧಾರದ ಮೇಲೆ ಸಿಗುವುದಿಲ್ಲ ಎಂಬ ವಾಸ್ತವವನ್ನು ಪರಿಣಾಮಕಾರಿಯಾಗಿ ಪ್ರತಿಪಾದಿಸುತ್ತದೆ.**
೫. ಶಂಕರನ ಮಲೆನಾಡಿನಲ್ಲಿದ್ದ ಊರು ಹೊನ್ನಮ್ಮನನ್ನು ಆಕರ್ಷಿಸಿದ್ದು ಹೇಗೆ?
ಹೊನ್ನಮ್ಮಳು ತುಮಕೂರಿನಲ್ಲಿ ಬೆಳೆದು, ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದವಳು. ಮದುವೆಯಾದ ನಂತರ ಮೊದಲ ಬಾರಿಗೆ ಶಂಕರನೊಂದಿಗೆ ಮಲೆನಾಡಿನ ಊರಿಗೆ ಹೋದಾಗ, ದಾರಿಯುದ್ದಕ್ಕೂ ಕಾಣುತ್ತಿದ್ದ ದಟ್ಟ ಕಾಡುಗಳು, ಹಸಿರು ಪ್ರಕೃತಿ, ಬೆಟ್ಟ-ಗುಡ್ಡಗಳು ಮತ್ತು ಮನಮೋಹಕ ಪರಿಸರ ಅವಳನ್ನು ಬಹಳವಾಗಿ ಆಕರ್ಷಿಸಿದವು. ಆರಂಭದಲ್ಲಿ ರೈಲು ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ ನಡೆದುಕೊಂಡು ಹೋಗಬೇಕಾದ ಕಾರಣ ಕೋಪಗೊಂಡಿದ್ದರೂ, ಮಲೆನಾಡಿನ ನೈಸರ್ಗಿಕ ಸೌಂದರ್ಯವನ್ನು ಕಂಡ ತಕ್ಷಣ ಆ ಕೋಪ ಮಾಯವಾಯಿತು.
ನಂತರದ ವರ್ಷಗಳಲ್ಲಿಯೂ ಊರಿಗೆ ಹೋಗುವ ಪ್ರತಿಯೊಂದು ಪ್ರಯಾಣ ಅವಳಿಗೆ ಹೊಸ ಉಲ್ಲಾಸವನ್ನು ನೀಡುತ್ತಿತ್ತು. ಊರಿನ ಹಬ್ಬ-ಹರಿದಿನಗಳು, ಭೂಮಿ ಹುಣ್ಣಿಮೆ ಮೊದಲಾದ ಸಂಪ್ರದಾಯಗಳು, ಅಲ್ಲಿನ ಆತ್ಮೀಯ ಜನರು, ಕುಟುಂಬದವರ ಪ್ರೀತಿ ಮತ್ತು ಪ್ರಕೃತಿಯ ಮಡಿಲಿನ ಜೀವನ ಅವಳ ಮನಸೆಳೆಯಿತು. ಅಷ್ಟೇ ಅಲ್ಲದೆ, ಅಡುಗೆ-ಮನೆಯ ಕೆಲಸಗಳಲ್ಲಿ ಭಾಗವಹಿಸಿ, ಮನೆಯವರೊಂದಿಗೆ ಬೆರೆತು ಬದುಕುವ ಮೂಲಕ ಆ ಊರನ್ನು ತನ್ನ ಸ್ವಂತ ಊರಿನಂತೆಯೇ ಪ್ರೀತಿಸಲು ಆರಂಭಿಸಿದಳು.
**ಹೀಗಾಗಿ, ಮಲೆನಾಡಿನ ಪ್ರಕೃತಿ ಸೌಂದರ್ಯ, ಹಸಿರು ಪರಿಸರ, ಹಳ್ಳಿಯ ಸಂಸ್ಕೃತಿ, ಹಬ್ಬಗಳ ಸಂಭ್ರಮ ಮತ್ತು ಕುಟುಂಬದ ಆತ್ಮೀಯತೆ ಹೊನ್ನಮ್ಮನನ್ನು ಶಂಕರನ ಊರಿನತ್ತ ಆಕರ್ಷಿಸಿತು.**
೬. ಹೊನ್ನಮ್ಮ ಹಳ್ಳಿಯ ಶಂಕರನ ಕುಟುಂಬದೊಂದಿಗೆ ಬೆರೆತ ಬಗೆ ಹೇಗೆ? ವಿವರಿಸಿ.
ಹೊನ್ನಮ್ಮಳು ತುಮಕೂರಿನಲ್ಲಿ ಬೆಳೆದು, ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದವಳಾಗಿದ್ದರೂ, ಮದುವೆಯಾದ ನಂತರ ಶಂಕರನ ಮಲೆನಾಡಿನ ಹಳ್ಳಿಯ ಜೀವನವನ್ನು ಮನಸಾರೆ ಸ್ವೀಕರಿಸಿದಳು. ಆರಂಭದಲ್ಲಿ "ನಿಮ್ಮ ಊರು" ಎಂದು ಹೇಳುತ್ತಿದ್ದ ಅವಳು, ನಂತರ ಆ ಊರನ್ನು "ನಮ್ಮ ಊರು" ಎಂದು ಕರೆಯುವಷ್ಟು ಆತ್ಮೀಯಳಾದಳು.
ಊರಿಗೆ ಹೋದ ಕೂಡಲೇ ಅಡುಗೆ ಮನೆಗೆ ಹೋಗಿ ಮನೆಯ ಹೆಂಗಸರೊಂದಿಗೆ ಅಡುಗೆ ಕೆಲಸಗಳಲ್ಲಿ ಕೈಜೋಡಿಸುತ್ತಿದ್ದಳು. ಹಬ್ಬ-ಹರಿದಿನಗಳ ಸಿದ್ಧತೆ, ವಿವಿಧ ತಿನಿಸುಗಳನ್ನು ಮಾಡುವ ಕೆಲಸಗಳಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಳು. ಹಿರಿಯರನ್ನು ಗೌರವಿಸಿ, ಸಂಬಂಧಿಕರನ್ನು ಪ್ರೀತಿಯಿಂದ ಕಾಣುತ್ತಿದ್ದ ಕಾರಣ ಎಲ್ಲರಿಗೂ ಅವಳು ಮನೆಯ ಮಗಳಂತಾಗಿದ್ದಳು. ಬೇರೆ ಸಮುದಾಯದವಳಾಗಿದ್ದರೂ ಯಾವುದೇ ಭೇದಭಾವವಿಲ್ಲದೆ ಕುಟುಂಬದ ಸಂಪ್ರದಾಯಗಳನ್ನು ಗೌರವಿಸಿ ಪಾಲಿಸುತ್ತಿದ್ದಳು.
ಆದರೆ, ಪ್ರಾಣಿಗಳ ಬೇಟೆ ಮತ್ತು ಮಾಂಸಾಹಾರದ ಬಗ್ಗೆ ಮಾತ್ರ ತನ್ನ ಅಸಮ್ಮತಿಯನ್ನು ವ್ಯಕ್ತಪಡಿಸುತ್ತಿದ್ದಳು. ಉಳಿದ ಎಲ್ಲಾ ಆಚರಣೆಗಳು, ಸಂಪ್ರದಾಯಗಳು ಮತ್ತು ಕುಟುಂಬದ ಜೀವನಶೈಲಿಯನ್ನು ಸಂತೋಷದಿಂದ ಅಳವಡಿಸಿಕೊಂಡಿದ್ದಳು.
**ಹೀಗಾಗಿ, ಹೊನ್ನಮ್ಮ ತನ್ನ ಸರಳತೆ, ಹೊಂದಾಣಿಕೆಯ ಗುಣ, ಪ್ರೀತಿ, ಗೌರವ ಮತ್ತು ಸಹಕಾರದ ಮನೋಭಾವದಿಂದ ಶಂಕರನ ಹಳ್ಳಿಯ ಕುಟುಂಬದೊಂದಿಗೆ ಸಂಪೂರ್ಣವಾಗಿ ಬೆರೆತು, ಅವರ ಮನೆಯ ಸದಸ್ಯೆಯಾಗಿ ಎಲ್ಲರ ಪ್ರೀತಿಯನ್ನು ಗಳಿಸಿದಳು.**
೬. ಭೂಮಿ ಹುಣ್ಣಿಮೆಯ ವೈಶಿಷ್ಟ್ಯವೇನು? ವಿವರಿಸಿ.
**ಭೂಮಿ ಹುಣ್ಣಿಮೆ** ಮಲೆನಾಡಿನ ರೈತರ ಪ್ರಮುಖ ಸಾಂಪ್ರದಾಯಿಕ ಹಬ್ಬವಾಗಿದೆ. ಈ ಹಬ್ಬದಲ್ಲಿ ರೈತರು ಭೂಮಿಯನ್ನು ತಾಯಿಯೆಂದು ಭಾವಿಸಿ, ಬೆಳೆದು ನಿಂತಿರುವ ಭತ್ತದ ಪೈರಿಗೆ ಪೂಜೆ ಸಲ್ಲಿಸಿ ಉತ್ತಮ ಬೆಳೆ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಮಳೆಗಾಲದ ನಂತರ ಹಸಿರಿನಿಂದ ಕಂಗೊಳಿಸುವ ಭೂಮಿಗೆ ಕೃತಜ್ಞತೆ ಸಲ್ಲಿಸುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿದೆ.
ಹಬ್ಬದ ಮುನ್ನಾದಿನ ಹೆಂಗಸರು ವಿವಿಧ ಬಗೆಯ ಸೊಪ್ಪುಗಳನ್ನು ಹೆಕ್ಕಿ, ತರಕಾರಿ ಪಲ್ಯಗಳು, ಹೋಳಿಗೆ, ಗೆಣಸು ಮುಂತಾದ ವಿಶೇಷ ತಿನಿಸುಗಳನ್ನು ಸಿದ್ಧಪಡಿಸುತ್ತಾರೆ. ಗಂಡಸರು ಗದ್ದೆಯ ಹಾಳಿಯ ಮೇಲೆ ಬಾಳೆ ಎಲೆ, ಬಾಳೆಯ ಕಂದು ಮತ್ತು ಮಾವಿನ ತೋರಣಗಳಿಂದ ಪೂಜೆಯ ಸ್ಥಳವನ್ನು ಅಲಂಕರಿಸುತ್ತಾರೆ. ನಸುಕಿನಲ್ಲಿ ಮನೆಯವರೆಲ್ಲ ಮಡಿಯಾಗಿ ಗದ್ದೆಗೆ ತೆರಳಿ ಭೂಮಿಪೂಜೆ ನೆರವೇರಿಸುತ್ತಾರೆ.
ಈ ಸಂದರ್ಭದಲ್ಲಿ ಎಲ್ಲರೂ **ಹಂಗುನೂಲು** ಕಟ್ಟಿಕೊಂಡು ಭೂಮಿಯೊಂದಿಗೆ ತಮ್ಮ ಬಾಂಧವ್ಯ ಹಾಗೂ ಭೂಮಿಯ ಋಣವನ್ನು ಸ್ಮರಿಸುತ್ತಾರೆ. ನಂತರ ಪೂಜಿಸಿದ ತಿನಿಸುಗಳನ್ನು ಎಲ್ಲರೂ ಹಂಚಿಕೊಂಡು ಸೇವಿಸುತ್ತಾರೆ.
**ಹೀಗಾಗಿ, ಭೂಮಿ ಹುಣ್ಣಿಮೆ ಹಬ್ಬವು ಭೂಮಾತೆಯ ಆರಾಧನೆ, ಕೃಷಿ ಸಂಸ್ಕೃತಿಯ ಮಹತ್ವ, ಪ್ರಕೃತಿಯ ಬಗ್ಗೆ ಕೃತಜ್ಞತೆ, ಕುಟುಂಬದ ಐಕ್ಯತೆ ಮತ್ತು ಸಮೃದ್ಧ ಜೀವನದ ಆಶಯವನ್ನು ಸಾರುವ ವಿಶಿಷ್ಟ ಹಬ್ಬವಾಗಿದೆ.**
೭. ಹೊನ್ನಮ್ಮನ ವ್ಯಕ್ತಿತ್ವವನ್ನು ಪರಿಚಯ ಮಾಡಿಕೊಡಿ.
ಹೊನ್ನಮ್ಮಳು **'ಭೂಮಿ ಹುಣ್ಣಿಮೆ'** ಕಥೆಯ ಪ್ರಮುಖ ಪಾತ್ರಗಳಲ್ಲಿ ಒಬ್ಬಳು. ಅವಳು ವಿದ್ಯಾವಂತಳು, ಸಹನಶೀಲಳು, ಪ್ರೀತಿಯ ಸ್ವಭಾವದವಳು ಹಾಗೂ ಹೊಂದಾಣಿಕೆಯ ಮನೋಭಾವ ಹೊಂದಿದ ಮಹಿಳೆ. ತುಮಕೂರಿನಲ್ಲಿ ಬೆಳೆದು ಬೆಂಗಳೂರಿನಲ್ಲಿ ಉನ್ನತ ಶಿಕ್ಷಣ ಪಡೆದಿದ್ದರೂ, ಮದುವೆಯಾದ ನಂತರ ಶಂಕರನ ಮಲೆನಾಡಿನ ಸಂಸ್ಕೃತಿ, ಸಂಪ್ರದಾಯ ಮತ್ತು ಜೀವನಶೈಲಿಯನ್ನು ಮನಃಪೂರ್ವಕವಾಗಿ ಸ್ವೀಕರಿಸಿದಳು.
ಶಂಕರನಿಗೆ ಕಚೇರಿಯಲ್ಲಿ ಬಡ್ತಿ ಸಿಗದೆ ಮನನೊಂದಾಗ ಅವನಿಗೆ ಧೈರ್ಯ ತುಂಬಿ, ರಾಜೀನಾಮೆ ನೀಡದಂತೆ ಸಮಾಧಾನಪಡಿಸಿದಳು. ಸಂಕಷ್ಟದ ಸಮಯದಲ್ಲಿ ಗಂಡನಿಗೆ ಬೆಂಬಲವಾಗಿ ನಿಂತು ಅವನ ಆತ್ಮಸ್ಥೈರ್ಯವನ್ನು ಹೆಚ್ಚಿಸಿದಳು. ಅವಳು ಮನೆಮಂದಿಯೊಂದಿಗೆ ಆತ್ಮೀಯವಾಗಿ ಬೆರೆತು, ಅಡುಗೆ-ಮನೆಯ ಕೆಲಸಗಳಲ್ಲಿ ಭಾಗವಹಿಸಿ, ಎಲ್ಲರ ಪ್ರೀತಿ ಮತ್ತು ಗೌರವವನ್ನು ಗಳಿಸಿದಳು.
ಮಲೆನಾಡಿನ ಪ್ರಕೃತಿ, ಹಬ್ಬ-ಹರಿದಿನಗಳು ಮತ್ತು ಗ್ರಾಮೀಣ ಸಂಸ್ಕೃತಿಯನ್ನು ತುಂಬ ಇಷ್ಟಪಟ್ಟು, ಊರನ್ನು ತನ್ನ ಸ್ವಂತ ಊರಿನಂತೆ ಪ್ರೀತಿಸುತ್ತಾಳೆ. ಆದರೆ ಪ್ರಾಣಿಗಳ ಬೇಟೆ ಮತ್ತು ಅನಗತ್ಯ ಹಿಂಸೆಯನ್ನು ವಿರೋಧಿಸುವ ಕರುಣಾಮಯಿ ಸ್ವಭಾವ ಅವಳದು. ಬೇರೆ ಸಮುದಾಯದವಳಾಗಿದ್ದರೂ ಕುಟುಂಬದ ಸಂಪ್ರದಾಯಗಳನ್ನು ಗೌರವಿಸಿ ಪಾಲಿಸುವ ಗುಣ ಅವಳಲ್ಲಿದೆ.
ಒಟ್ಟಾರೆ, ಹೊನ್ನಮ್ಮಳು ಪ್ರೀತಿಯ ಪತ್ನಿ, ಆದರ್ಶ ಗೃಹಿಣಿ, ಸಹನಶೀಲ, ಹೊಂದಾಣಿಕೆಯ ಗುಣವುಳ್ಳ, ಪ್ರಕೃತಿ ಪ್ರೇಮಿ ಹಾಗೂ ಮಾನವೀಯ ಮೌಲ್ಯಗಳನ್ನು ಗೌರವಿಸುವ ಆದರ್ಶ ವ್ಯಕ್ತಿತ್ವದ ಮಹಿಳೆಯಾಗಿದ್ದಾಳೆ.**
೮. ಶಂಕರನನ್ನು ಒತ್ತಡದಿಂದ ಹೊನ್ನಮ್ಮ ಹೇಗೆ ಹೊರ ತರುತ್ತಾಳೆ?
**'ಭೂಮಿ ಹುಣ್ಣಿಮೆ'** ಕಥೆಯಲ್ಲಿ ಹೊನ್ನಮ್ಮ ಆದರ್ಶ ಪತ್ನಿಯಾಗಿ ಚಿತ್ರಿತಳಾಗಿದ್ದಾಳೆ. ಶಂಕರನು ಖಾಸಗಿ ಸಂಸ್ಥೆಯಲ್ಲಿ ಹಲವು ವರ್ಷಗಳ ಕಾಲ ಪ್ರಾಮಾಣಿಕವಾಗಿ, ನಿಷ್ಠೆಯಿಂದ ಮತ್ತು ಶ್ರಮಪಟ್ಟು ಕೆಲಸ ಮಾಡಿದ್ದನು. ರಾಜ್ಯದ ವಿವಿಧ ಪ್ರಾದೇಶಿಕ ಕಚೇರಿಗಳಲ್ಲಿ ಉತ್ತಮ ಸೇವೆ ಸಲ್ಲಿಸಿ ಉತ್ತಮ ಹೆಸರು ಗಳಿಸಿದ್ದನು. ಆದರೂ, ವಿಭಾಗ ಮುಖ್ಯಸ್ಥನ ಹುದ್ದೆಗೆ ಅವನನ್ನು ಆಯ್ಕೆ ಮಾಡದೆ, ಅವನಿಗಿಂತ ನಾಲ್ಕೈದು ವರ್ಷ ಕಿರಿಯ ಅಧಿಕಾರಿಗೆ ಬಡ್ತಿ ನೀಡಲಾಗುತ್ತದೆ. ಈ ಘಟನೆಯಿಂದ ಶಂಕರನಿಗೆ ತನ್ನ ಪ್ರಾಮಾಣಿಕ ಸೇವೆಗೆ ಯಾವುದೇ ಮೌಲ್ಯ ದೊರೆಯಲಿಲ್ಲ ಎಂಬ ಭಾವನೆ ಮೂಡುತ್ತದೆ. ಅವನು ತೀವ್ರ ನಿರಾಶೆ, ಬೇಸರ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾನೆ. ರಾಜೀನಾಮೆ ನೀಡಿ ಕೆಲಸ ಬಿಡುವ ಯೋಚನೆಯನ್ನೂ ಮಾಡುತ್ತಾನೆ.
ಈ ಸಂದರ್ಭದಲ್ಲಿ ಹೊನ್ನಮ್ಮ ತನ್ನ ಪ್ರಬುದ್ಧತೆ, ತಾಳ್ಮೆ ಮತ್ತು ಜೀವನಾನುಭವದಿಂದ ಶಂಕರನಿಗೆ ಧೈರ್ಯ ತುಂಬುತ್ತಾಳೆ. **"ಕೆಲಸ ಬಿಟ್ಟು ಏನು ಮಾಡುತ್ತೀರಿ? ಮಕ್ಕಳೇ ತಮ್ಮ ಕಾಲ ಮೇಲೆ ನಿಂತಿದ್ದಾರೆ. ಆದರೆ ಅವರನ್ನು ಅವಲಂಬಿಸಿ ಬದುಕಲು ಸಾಧ್ಯವಿಲ್ಲ. ಕೆಲಸ ಮಾಡಿದರೆ ಬಡ್ತಿ ಕೊಡುತ್ತೇವೆ ಎಂದು ಸಾವುಕಾರರು ಎಲ್ಲಿಯೂ ಬರೆದುಕೊಟ್ಟಿಲ್ಲ. ಕೆಲಸ ಮಾಡಿದಕ್ಕೆ ಸಂಬಳ ಕೊಡುತ್ತಾರೆ. ಆದ್ದರಿಂದ ರಾಜೀನಾಮೆ ಕೊಡುವುದು ಸರಿಯಲ್ಲ"** ಎಂದು ಸಮಾಧಾನದ ಮಾತುಗಳನ್ನು ಹೇಳುತ್ತಾಳೆ. ಹೀಗೆ ಅವನ ಆತ್ಮಸ್ಥೈರ್ಯವನ್ನು ಹೆಚ್ಚಿಸಿ, ಆತುರದ ನಿರ್ಧಾರ ತೆಗೆದುಕೊಳ್ಳದಂತೆ ತಡೆಯುತ್ತಾಳೆ.
ಅಷ್ಟೇ ಅಲ್ಲದೆ, ಕಚೇರಿಯ ವಾತಾವರಣದಿಂದ ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗಲೆಂದು ಊರಿಗೆ ಹೋಗಿ ಗದ್ದೆ-ತೋಟಗಳನ್ನು ನೋಡಿ ಬರೋಣ ಎಂದು ಸಲಹೆ ನೀಡುತ್ತಾಳೆ. ಈ ಸಲಹೆಯನ್ನು ಶಂಕರ ಒಪ್ಪಿಕೊಳ್ಳುತ್ತಾನೆ. ಊರಿಗೆ ಹೋಗುವ ಪ್ರಯಾಣದಲ್ಲಿ ಹೊನ್ನಮ್ಮ ಭೂಮಿ ಹುಣ್ಣಿಮೆ ಹಬ್ಬದ ನೆನಪುಗಳನ್ನು ಹಂಚಿಕೊಳ್ಳುತ್ತಾಳೆ. ಮಲೆನಾಡಿನ ಪ್ರಕೃತಿ, ಹಸಿರು ಪರಿಸರ, ಹಳ್ಳಿಯ ಜೀವನ, ಹಬ್ಬದ ಸಂಭ್ರಮ ಮತ್ತು ಕುಟುಂಬದ ಆತ್ಮೀಯತೆಯ ನೆನಪುಗಳು ಶಂಕರನ ಮನಸ್ಸಿಗೆ ಹೊಸ ಚೈತನ್ಯವನ್ನು ನೀಡುತ್ತವೆ. ಕಚೇರಿಯ ಒತ್ತಡದಿಂದ ಅವನ ಗಮನವನ್ನು ಬೇರೆಡೆಗೆ ತಿರುಗಿಸಿ, ಮನಸ್ಸಿಗೆ ನೆಮ್ಮದಿ ದೊರಕುವಂತೆ ಮಾಡುತ್ತಾಳೆ.
ಹೊನ್ನಮ್ಮ ಕೇವಲ ಪತ್ನಿಯಾಗಿ ಮಾತ್ರವಲ್ಲ, ಒಳ್ಳೆಯ ಸ್ನೇಹಿತೆ, ಮಾರ್ಗದರ್ಶಕಿ ಮತ್ತು ಮಾನಸಿಕ ಬೆಂಬಲವಾಗಿ ಶಂಕರನೊಂದಿಗೆ ನಿಲ್ಲುತ್ತಾಳೆ. ಸಂಕಷ್ಟದ ಸಂದರ್ಭದಲ್ಲಿ ಧೈರ್ಯ ಕಳೆದುಕೊಳ್ಳದೆ, ಗಂಡನಿಗೆ ಆತ್ಮವಿಶ್ವಾಸ ತುಂಬಿ, ಜೀವನವನ್ನು ಸಕಾರಾತ್ಮಕವಾಗಿ ನೋಡುವಂತೆ ಪ್ರೇರೇಪಿಸುತ್ತಾಳೆ.
ಹೀಗಾಗಿ, ತನ್ನ ಪ್ರೀತಿಯ ಮಾತುಗಳು, ಸಮಯೋಚಿತ ಸಲಹೆ, ಧೈರ್ಯ ತುಂಬುವ ನಿಲುವು ಮತ್ತು ಊರಿಗೆ ಕರೆದುಕೊಂಡು ಹೋಗುವ ಮೂಲಕ ಹೊನ್ನಮ್ಮ ಶಂಕರನನ್ನು ಮಾನಸಿಕ ಒತ್ತಡದಿಂದ ಹೊರತಂದು, ಅವನಲ್ಲಿ ಹೊಸ ಆಶಾಭಾವನೆ, ಆತ್ಮವಿಶ್ವಾಸ ಮತ್ತು ನೆಮ್ಮದಿಯನ್ನು ಮೂಡಿಸುತ್ತಾಳೆ.
********